ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ರಾಬರ್ಟ್ ಪಯಾಸ್ ಗೆ ಮದ್ರಾಸ್ ಹೈ ಕೋರ್ಟ್ ಗುರುವಾರ 30 ದಿನಗಳ ಪೆರೋಲ್ ನೀಡಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 25ರಿಂದ ಡಿಸೆಂಬರ್ 24ರ ವರೆಗೆ ಪೆರೋಲ್ ನೀಡಲಾಗಿದ್ದು, ಇದರ ಅವಧಿ ಮುಗಿದ ಬಳಿಕ ಮತ್ತೆ ಸೆರೆವಾಸ ಮುಂದುವರಿಯಲಿದೆ.
ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಭಾಗಿಯಾದ 7 ಅಪರಾಧಿಗಳಲ್ಲಿ ರಾಬರ್ಟ್ ಪಾಯಸ್ ಕೂಡ ಒಬ್ಬನಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ 2ನೇ ಪೆರೋಲ್ ಇದಾಗಿದ್ದು, ಮತ್ತೋರ್ವ ಆರೋಪಿ ನಳಿನಿ ಗೆ ಮಗಳ ಮದುವೆ ಕಾರಣಕ್ಕೆ ಈ ಹಿಂದೆ ಜುಲೈನಲ್ಲಿ 1 ತಿಂಗಳ ಪೆರೋಲ್ ಲಭಿಸಿತ್ತು.
1991ರ ಅಗಸ್ಟ್ 16ರಿಂದ ಅಪರಾಧಿಗಳು ಜೈಲಿನಲ್ಲಿದ್ದು, ಬಹುತೇಕ 28 ವರ್ಷಗಳು ಸಂದಿವೆ. ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಆರ್.ಎಂ.ಟಿ. ಟೀಕಾ ರಾಮನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಪೆರೋಲ್ ಅನ್ನು ಮಂಜೂರು ಮಾಡಿದೆ. ತನ್ನ ಪೆರೋಲ್ ಆದೇಶದಲ್ಲಿ ಕೋರ್ಟ್ ಕೆಲವೊಂದು ಷರತ್ತನ್ನು ವಿಧಿಸಿದ್ದು, ಮಾಧ್ಯಮ ಮತ್ತು ರಾಜಕೀಯ ಪಕ್ಷಗಳ ಸಂವಾದ ಮತ್ತು ಚರ್ಚೆಯಲ್ಲಿ ಭಾಗಿಯಾಗುವಂತಿಲ್ಲ. ಸಮಾಜದ ಸ್ವಾಸ್ಥ ಕದಡುವ ಯಾವುದೇ ಕೃತ್ಯಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
1991ರ ಮೇ 21ರಂದು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾದ್ದ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬ್ ಬಳಸಿ ಹತ್ಯೆ ಮಾಡಲಾಗಿತ್ತು.