ಹುಬ್ಬಳ್ಳಿ: ನಿವೃತ್ತ ಸಾರಿಗೆ ನೌಕರರ ಉಪಧನ, ರಜೆ ನಗದೀಕರಣ ಮತ್ತು ಇತರೆ ಬೇಡಿಕೆಗಳಿಗೆ ಆಗ್ರಹಿಸಿ ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧ್ಯಕ್ಷರಿಗೆ ಫೆ.8ರಂದು ಮತ್ತೂಮ್ಮೆ ಅಂತಿಮ ಗಡುವಿನ ಮನವಿ ನೀಡಲು ವಾಕರಸಾ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ನಿರ್ಧರಿಸಿದರು.
ವಾಕರಸಾ ಸಂಸ್ಥೆಯ ನಿವೃತ್ತ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೈಗೊಳ್ಳಲಾಗುವ ಉಪವಾಸ ಸತ್ಯಾಗ್ರಹ ಕುರಿತು ಚರ್ಚಿಸಲು ರವಿವಾರ ಇಲ್ಲಿನ ಗೋಕುಲ ರಸ್ತೆ ಬಸವೇಶ್ವರ ನಗರದ ಡಾ| ಕೆ.ಎಸ್. ಶರ್ಮಾ ಭವನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡರು.
ಸಂಘದ ಸದಸ್ಯರ ಬೇಡಿಕೆಗಳ ಈಡೇರಿಕೆಗೆ ವಾಕರಸಾ ಸಂಸ್ಥೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಫೆ. 8ರಂದು ಬೆಳಗ್ಗೆ 11:30 ಗಂಟೆಗೆ ಮತ್ತೂಮ್ಮೆ ಅಂತಿಮ ಮನವಿ ಸಲ್ಲಿಸಿ, ವಾರದ ಗಡುವು ನೀಡೋಣ. ಅಷ್ಟರೊಳಗೆ ಪರಿಹಾರ ಸಿಗದಿದ್ದರೆ ಅನಿವಾರ್ಯವಾಗಿ ಸಂಸ್ಥೆಯ ಕೇಂದ್ರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳೋಣ ಎಂದು ನಿರ್ಣಯಿಸಿದರು.
ಇದನ್ನೂ ಓದಿ :ವಾಹನ ರಹಿತ ರಸ್ತೆ ಮಾದರಿ ಮಾಡುವ ಯೋಜನೆ: ಬೆಲ್ಲದ
ಇದೇ ವೇಳೆ ಡಾ| ಕೆ.ಎಸ್. ಶರ್ಮಾ ಅವರನ್ನು ಭೇಟಿ ಮಾಡಿ, ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಅವರಿಂದ ಸಲಹೆ-ಸೂಚನೆ ಪಡೆದರು. ಸಂಘದ ಅಧ್ಯಕ್ಷ ಎಂ.ಎಲ್. ಮುಂಡರಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ರಂಗಣ್ಣ ತಳವಾರ, ಎಸ್. ಎಫ್. ಗುಡದೂರ, ಎಂ.ಜಿ. ಹುಲಗೂರ, ಗುರುನಾಥ ಯಾವಗಲ್, ಜಗದೀಶ ಕಾಲೇಬಾಗ, ಎನ್.ಎಫ್. ನರಗುಂದ, ಎಸ್.ಡಿ. ಶೇಸು, ಅಶೋಕ ಹೋಮಕಳಸೆ, ಸಿ.ಕೆ. ಕಾಂಬಳೆ, ಎಸ್.ಬಿ. ಮುಳೆ, ತಿಹಾರ ಲೋಂಡೆ, ಲತಾ ತೇರದಾಳ ಮೊದಲಾದವರಿದ್ದರು.