Advertisement

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

10:32 PM Oct 18, 2021 | Team Udayavani |

ಬೆಳ್ತಂಗಡಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬದಿ ಮಳೆಗಾಲ ಮುನ್ನ ಟ್ರಿಮ್ಮಿಂಗ್‌ ಕೆಲಸ ನಡೆಸದೆ ಇರುವುದರಿಂದ ಮರಗಳು ಅಪಾಯಕಾರಿಯಾಗಿ ಸವಾರರನ್ನು ಆತಂಕಕ್ಕೆ ತಳ್ಳಿದೆ.

Advertisement

ಪ್ರಸಕ್ತ ಸಂಜೆಯಾಗುತ್ತಲೆ ಗಾಳಿ ಮಳೆಯಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಜತೆಗೆ ರಾಜ್ಯ ಹೆದ್ದಾರಿಗಳಲ್ಲಿ ಬೃಹದಾಕಾರದ ಮರಗಳ ಗೆಲ್ಲುಗಳು ಯಾವುದೇ ಸಮಯದಲ್ಲೂ ನೆಲಕ್ಕುರುಳುವ ಸಾಧ್ಯತೆ ಇದೆ.

ಪ್ರತೀ ವರ್ಷ ಚಾರ್ಮಾಡಿ ಘಾಟಿ ಪ್ರದೇಶದಲ್ಲೂ ಅಗಾಗ ಮರಗಳು ರಸ್ತೆಗೆ ಉರುಳಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಿಡಿಗಲ್‌ನಿಂದ ಚಾರ್ಮಾಡಿ ಘಾಟಿ ತನಕದ ಸುಮಾರು 35 ಕಿ.ಮೀ. ಹೆದ್ದಾರಿಯು ಅಪಾಯಕಾರಿಯಾಗಿದೆ.

ಹಲವು ಮೀಸಲು ಮತ್ತು ರಕ್ಷಿತಾರಣ್ಯಗಳ ಮೂಲಕ ಹೆದ್ದಾರಿ ಹಾದುಹೋಗುತ್ತದೆ. ಈ ಪ್ರದೇಶದ ರಸ್ತೆಯಲ್ಲಿ ಬಹು ಸಂಖ್ಯೆಯ ಬೃಹತ್‌ ಗಾತ್ರದ ಮರಗಳಿದ್ದು, ರಸ್ತೆಗೆ ಬಾಗಿ ನಿಂತಿದೆ. ಒಂದಿಷ್ಟು ಗಾಳಿ-ಮಳೆ ಬಂದರೆ ಈ ಮರಗಳ ಗೆಲ್ಲು ಅಥವಾ ಮರಗಳೇ ಬುಡಸಮೇತ ಉರುಳುತ್ತವೆ. ಮತ್ತೊಂದೆಡೆ ಉಜಿರೆ ಧರ್ಮಸ್ಥಳ ಕೊಕ್ಕಡ ಮಾರ್ಗವಾಗಿ ಶಿರಾಡಿ ಘಾಟ್‌ ರಸ್ತೆ ಸಂಪರ್ಕಿಸುವ ಹೆದ್ದಾರಿಯ್ಲಲೂ ಇದೇ ಸಮಸ್ಯೆ ಎದುರಾಗಿದೆ. ಈ ನಡುವೆ ರಸ್ತೆಗಳ ಅಂಚಿನಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದು ರಸ್ತೆ ಬದಿ ವಾಹನ ನಿಲುಗಡೆಗೊಳಿಸಿ ಅಹಾರ ಸೇವಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಮತ್ತಷ್ಟು ಅಪಾಯವೇ ಹೆಚ್ಚಾಗಿದೆ.

ಇದನ್ನೂ ಓದಿ:ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

Advertisement

ಪೂಂಜಾಲಕಟ್ಟೆಯಿಂದ ಬೆಳ್ತಂಗಡಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಬೃಹದಾಕಾರದ ಮರಗಳ ಗೆಲ್ಲುಗಳು ರಸ್ತೆಗೆ ಬಾಗಿಕೊಂಡಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಈ ಸಮಸ್ಯೆ ಬಗೆ ಹರಿಸಬೇಕಿದ್ದು, ಇಬ್ಬರ ಮಧ್ಯದ ಸಮನ್ವಯ ಕೊರತೆಯಿಂದ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ.

ಮೆಸ್ಕಾಂಗೆ ಸಮಸ್ಯೆ
ಅಪಾಯಕಾರಿ ಮರಗಳಿಂದ ಮೆಸ್ಕಾಂಗೆ ಸಮಸ್ಯೆ ಹಾಗೂ ನಷ್ಟ ಉಂಟಾಗುತ್ತಿದ್ದು ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಶಿವಶಂಕರ್‌, ಎಇಇ, ಮೆಸ್ಕಾಂ ಬೆಳ್ತಂಗಡಿ

ಮರ ತೆರವು
ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮೆಸ್ಕಾಂ ಇಲಾಖೆ ಅಪಾಯಕಾರಿ ಮರಗಳ ಕುರಿತು ಮನವಿ ಸಲ್ಲಿಸಿದರೆ ಆ ಪ್ರದೇಶವನ್ನು ಪರಿಶೀಲನೆ ನಡೆಸಿ ಮರ ತೆರವುಗೊಳಿಸುವ ಕುರಿತು ಸೂಚಿಸಬಹುದು.
-ತ್ಯಾಗರಾಜ್‌, ವಲಯ ಅರಣ್ಯಾಧಿಕಾರಿ

ವಿದ್ಯುತ್‌ ಸಂಚಾರ ವ್ಯತ್ಯಯ
ಮಳೆಗಾಲದಲ್ಲಿ ಮರಗಳು ವಿದ್ಯುತ್‌ ತಂತಿಮೇಲೆ ಬೀಳುವುದರಿಂದ ವರ್ಷಕ್ಕೆ ಕನಿಷ್ಠ 100ಕ್ಕೂ ಅಧಿಕ ಕಂಬಗಳು ಹಾನಿಗೊಳಗಾಗುತ್ತವೆ. ರಸ್ತೆ ಅಂಚಿನಲ್ಲಿ ತಂತಿ ಮೇಲೆ ಬಿದ್ದರೆ ಸಾಲು ಸಾಲು ಕಂಬಗಳು ಹಾನಿಯಾಗುವುದಲ್ಲದೆ ಒಂದೆಡೆ ವಿದ್ಯುತ್‌ ವ್ಯತ್ಯಯ ಜತೆಗೆ ವಾಹನ ಸಂಚಾರಕ್ಕೂ ತಡೆಯುಂಟಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next