Advertisement
ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಪರಿಷ್ಕರಣೆ ಮಾಡಿ ನೂತನವಾಗಿ ಘೋಷಣೆ ಮಾಡಬೇಕೆನ್ನುವ ನಿಯಮವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ 2018 ರಿಂದ ಪರಿಷ್ಕೃತ ಮಹಾಯೋಜನೆ ಘೋಷಣೆಯಾಗಿಲ್ಲ. ಇದರಿಂದ ಆನೆಗೊಂದಿ ಭಾಗದ ಗ್ರಾಮಗಳ ಜನರ ಬದುಕು ದುಸ್ತಾರವಾಗುತ್ತಿದ್ದು ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುವ ಅಂಜನಾದ್ರಿ ಸೇರಿ ಸುತ್ತಲಿನ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಕಲ್ಪಿಸಲು ಪ್ರಾಧಿಕಾರದ ನಿಯಮಗಳು ಅಡ್ಡಿಯಾಗುತ್ತಿವೆ. ಈ ಭಾಗದಲ್ಲಿ ಕೃಷಿ ಭೂಮಿ ಅತ್ಯಂತ ಕಡಿಮೆ ಇದ್ದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಊಟ ವಸತಿ ಕಲ್ಪಿಸಲು ಸ್ಥಳೀಯರು ನಡೆಸುತ್ತಿರುವ ಸಣ್ಣಪುಟಗಟ ವ್ಯವಹಾರಕ್ಕೂ ಪ್ರಾಧಿಕಾರದ ನಿಮಯಗಳು ಅಡ್ಡಿಯಾಗಿದ್ದು ಪ್ರಾಧಿಕಾರ ಈಗಾಗಲೇ ಹಲವು ಭಾರಿ ಇಲ್ಲಿಯ ಗುಡಿಸಲು ಹೊಟೇಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿದ್ದು ಜನರ ಬದುಕು ಸಂಕಷ್ಟಕ್ಕೀಡಾಗಿದೆ.
Related Articles
Advertisement
2018ರಲ್ಲಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿರೂಪಾಪೂರಗಡ್ಡಿಯಲ್ಲಿದ್ದ ಎಲ್ಲಾ ರೆಸಾರ್ಟ್ಗಳನ್ನು ತೆರವುಗೊಳಿಸಿದ ನಂತರ ಆನೆಗೊಂದಿ, ಹನುಮನಹಳ್ಳಿ, ಸಾಣಾಪೂರ, ಜಂಗ್ಲಿ, ಸೇರಿ ಸುತ್ತಲಿನ ಗ್ರಾಮಗಳಲ್ಲಿ ಅನಧಿಕೃತ ಹೋಟೆಲ್‌ಗಳು ಆರಂಭವಾದವು. ಇದಕ್ಕೆ ಸಂಘಟನೆಗಳು ಆಕ್ಷೇಪವೆತ್ತಿದ್ದರಿಂದ ಸದ್ಯ ಎಲ್ಲಾ ಹೊಟೇಲ್‌ಗಳನ್ನು ಒಂದು ತಿಂಗಳ ಹಿಂದೆ ಸೀಜ್ ಮಾಡಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು ಹಂಪಿ ಭಾಗದಲ್ಲಿ ಪ್ರಾಧಿಕಾರದ ನಿಯಮಗಳಲ್ಲಿ ಸಡಿಲಿಕೆ ಮಾಡಿ ಕಮರ್ಷಿಯಲ್ ಜೋನ್ ಮಾಡಿದಂತೆ ಆನೆಗೊಂದಿ ಭಾಗದಲ್ಲಿರುವ ಸ್ಮಾರಕಗಳ ಪ್ರದೇಶ ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ವ್ಯಾಪಾರ ವ್ಯವಹಾರ ನಡೆಸಲು ಈಗಿನ ಗ್ರೀನ್ ಜೋನ್ ರದ್ದು ಮಾಡಿ ಕಮರ್ಷಿಯಲ್ ಜೋನ್ ಮಾಡುವಂತೆ ಸ್ಥಳೀಯರ ಒತ್ತಾಯವಾಗಿದೆ.
ಅಂಜನಾದ್ರಿ ಭಾಗದ ಪ್ರವಾಸೋದ್ಯಮಕ್ಕೆ ಆದ್ಯತೆ :
ಕಿಷ್ಕಿಂದಾ ಅಂಜನಾದ್ರಿ ಪ್ರದೇಶ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಧಾರ್ಮಿಕ ನಂಬಿಕೆ ಇರುವವರು ಮತ್ತು ಪ್ರಕೃತಿ ಸೌಂದರ್ಯ ಸವಿಯುವವರು ಆಗಮಿಸುತ್ತಾರೆ. ಅಂಜನಾದ್ರಿ ದೇಶ ವಿದೇಶದಲ್ಲಿ ಖ್ಯಾತಿಯಾಗಿದೆ. ದಿನವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರಿಗೆ ಮೂಲಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು ಶೀಘ್ರವೇ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಹಂಪಿ ಪ್ರಾಧಿಕಾರದ ಕೆಲ ನಿಯಮಗಳು ಮಲತಾಯಿ ಧೋರಣೆಯಿಂದ ಕೂಡಿವೆ. ಕಳೆದ 20 ವರ್ಷಗಳಿಂದ ಆ ಭಾಗದ ಜನರು ಇದರಿಂದ ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಸ್ಯ ವಹಿಸಿದ್ದಾರೆ. ಹಂಪಿ ಭಾಗವನ್ನು ಕಮರ್ಷಿಯಲ್ ಜೋನ್ ಮಾಡಿ ಆನೆಗೊಂದಿ ಭಾಗವನ್ನು ಗ್ರೀನ್ ಜೋನ್ ಮಾಡಿರುವುದು ಸರಿಯಲ್ಲ. ನೂತನ ಮಾಸ್ಟರ್ ಪ್ಲಾನ್‌ನಲ್ಲಿ ಈ ಬಗ್ಗೆ ಗಮನ ಹರಿಸಲಾಗಿದೆ. ಶೀಘ್ರವೇ ನೂತನ ಮಾಸ್ಟರ್ ಪ್ಲಾನ್(ಮಹಾಯೋಜನೆ) ಘೋಷಣೆಯಾಗಲಿದ್ದು ಕೆಲ ನಿಯಮಗಳು ಸಡಿಲಿಕೆಯಾಗುವ ಸಾಧ್ಯತೆ ಇದೆ ಎಂದು ಶಾಸಕ ಪರಣ್ಣ ಮುನವಳ್ಳಿ ಉದಯವಾಣಿಗೆ ತಿಳಿಸಿದ್ದಾರೆ.
ವಿಶೇಷ ವರದಿ: ಕೆ .ನಿಂಗಜ್ಜ ಗಂಗಾವತಿ