Advertisement

ಪತ್ನಿಯನ್ನು ಕೊಂದಿದ್ದ  ಪತಿಗೆ ಜೀವಾವಧಿ ಸಜೆ

12:24 PM Apr 25, 2017 | Team Udayavani |

ಪುತ್ತೂರು: ಸಾಂಬಾರು ಚೆನ್ನಾಗಿ ಮಾಡಿಲ್ಲ ಎಂಬ ಸಿಟ್ಟಿನಿಂದ ಪತ್ನಿಯನ್ನು ಹೊಡೆದು ಕೊಂದು ಶವವನ್ನು ಬಾವಿಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ 
ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಸುರೇಶ್‌ ಶಿಕ್ಷೆಗೆ ಒಳಗಾದ ಅಪರಾಧಿ. ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಅವರ ನ್ಯಾಯಪೀಠ ಸೋಮವಾರ ತೀರ್ಪು ಪ್ರಕಟಿಸಿತ್ತು. ಭಾರತೀಯ ಅಪರಾಧ ದಂಡ ಸಂಹಿತೆಯ ಸೆಕ್ಷನ್‌ 302ರಂತೆ ಕೊಲೆ ಪ್ರಕರಣ ಸಾಬೀತಾಗಿದ್ದು, ಇದಕ್ಕೆ ಜೀವಾವಧಿ ಶಿಕ್ಷೆ, ಸೆಕ್ಷನ್‌ 498ರಂತೆ ದೈಹಿಕ, ಮಾನಸಿಕ, ಕಿರುಕುಳಕ್ಕೆ ಮೂರು ವರ್ಷ ಶಿಕ್ಷೆ ಮತ್ತು ಮೂರು ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳು ಜೈಲು ಶಿಕ್ಷೆ, ಸೆಕ್ಷನ್‌ 201ರಲ್ಲಿ ಸಾಕ್ಷ é ನಾಶ ಮಾಡಿದಕ್ಕೆ ಏಳು ವರ್ಷ ಶಿಕ್ಷೆ, 3,000 ರೂ. ದಂಡ ಹಾಗೂ ದಂಡ ವಿಧಿಸಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿವರ
2014ರ ನ. 10ರಂದು ಲಕ್ಷ್ಮೀ ಅವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ ಪ್ರಕರಣ ದಾಖಲಾಗಿದ್ದರೂ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ಸಾಬೀತಾಗಿತ್ತು. ವಿಚಾರಣೆ ಸಂದರ್ಭ ಮೃತ ಲಕ್ಷ್ಮೀ ಅವರ ಪತಿ ಸುರೇಶ್‌ ಕೊಲೆ ಆರೋಪಿ ಎಂದು ಸಾಬೀತಾಗಿತ್ತು.

ಪ್ರಕರಣ ನಡೆದ  9 ವರ್ಷಗಳ ಹಿಂದೆ ಸುರೇಶ್‌ ಮತ್ತು ಲಕ್ಷ್ಮೀ ವಿವಾಹವಾಗಿತ್ತು. ಲಕ್ಷ್ಮೀ ಅವರು ಮೂಲತಃ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ನಿವಾಸಿ. ಐದು ವರ್ಷಗಳಿಂದ ಪತ್ನಿಗೆ ಕಿರುಕುಳ, ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. 2014ರ ನ. 10ರಂದು ರಾತ್ರಿ ಗಂಟೆ 9.30ಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು.

ರಾತ್ರಿ ಸಾಂಬಾರು ಪದಾರ್ಥ ಸರಿಯಾಗಿ ಇಲ್ಲವೆಂದು ಪತ್ನಿಯ ಜತೆ ತಗಾದೆ ತೆಗೆದಿದ್ದ. ಈ ವೇಳೆ ಸಿಟ್ಟುಗೊಂಡು ಮರದ ತುಂಡಿನಿಂದ ಲಕ್ಷ್ಮೀಯ ಹಣೆಗೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನಂತರ ಶವವನ್ನು ಬಾವಿಗೆ ಹಾಕಿ, ಅದು ಆತ್ಮಹತ್ಯೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಕಡಬ ಪೊಲೀಸ್‌ ಠಾಣೆಯಲ್ಲಿ ಮಾನಸಿಕ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ದೇರಳಕಟ್ಟೆ ಪೊರೆನ್ಸಿಕ್‌ ಲ್ಯಾಬ್‌ನ ಡಾ| ಸೂರಜ್‌ ಎಸ್‌. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಲಕ್ಷ್ಮೀ ಅವರ ತಲೆಭಾಗಕ್ಕೆ ಗಂಭೀರ ಏಟು ತಗಲಿರುವ ವಿಚಾರ ಬೆಳಕಿಗೆ ಬಂದಿತ್ತು. 2014ರ ನ. 13ರಂದು ಇದೊಂದು ಆತ್ಮಹತ್ಯೆಯಲ್ಲ ಕೊಲೆ ಎಂದು ವರದಿ ಬಂದಿತ್ತು. ಸರಕಾರಿ ಅಭಿಯೋಜಕ ಉದಯ ಕುಮಾರ್‌ ವಾದ ಮಂಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next