Advertisement

ಹವಾಲ್ದಾರ್‌ ವಿಶ್ವನಾಥ್‌ಗೆ ಸೇನೆಯ ಕೆಲಸವೇ ಸಂಭ್ರಮ

01:00 AM Feb 04, 2019 | Harsha Rao |

ಪುತ್ತೂರು: ಕೊರೆಯುವ ಚಳಿ ಯನ್ನು ಸೀಳಿಕೊಂಡು ನುಗ್ಗಿದ್ದವು ಗುಂಡುಗಳು. ನಿಶ್ಚಿಂತೆಯಿಂದಿದ್ದ ಸೈನಿಕ ಶಿಬಿರ
ದೊಳಗೆ ಕ್ಷಣಾರ್ಧದಲ್ಲಿ ಅಲ್ಲೋಲಕಲ್ಲೋಲ. ಎಲ್ಲಿಂದ ಗುಂಡಿನ ದಾಳಿ, ಯಾವ ಕಡೆಗೆ ದೌಡಾಯಿಸಬೇಕು, ಏನು ನಡೆಯುತ್ತಿದೆ -ಏನೂ ತಿಳಿಯದ ಪರಿಸ್ಥಿತಿ.

Advertisement

ಅದು 2016ರ ಸೆಪ್ಟಂಬರ್‌ 18. ಉರಿ ಸೇನಾ ಶಿಬಿರದ ಮೇಲೆ ಉಗ್ರರ ಹೇಡಿತನದ ದಾಳಿ ನಡೆದ ದಿನ.
ಪುತ್ತೂರು ತಾಲೂಕಿನ ಶಾಂತಿಗೋಡು ಮುಂಡೋಡಿ ನಿವಾಸಿ, ಹವಾಲ್ದಾರ್‌ ವಿಶ್ವನಾಥ್‌ ಎಂ. ಅವರು ಅಂದು ಕೇವಲ 100 ಮೀ. ದೂರದಲ್ಲಿದ್ದ ಇನ್ನೊಂದು ಶಿಬಿರ ದಲ್ಲಿದ್ದರು. ರಾಜಸ್ಥಾನ ರೆಜಿಮೆಂಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಉರಿ ದಾಳಿಯ ಭೀಕರತೆ ಕಣ್ಣಾರೆ ಕಂಡವರು. 

ದಾಳಿ ನಡೆದಾಕ್ಷಣ ವಿಶ್ವನಾಥ್‌ ಅವರ ತಂಡಕ್ಕೆ ಸಂದೇಶ ರವಾನೆಯಾಯಿತು. ಇವರು ಶಿಬಿರದಲ್ಲೇ ಇದ್ದುಕೊಂಡು, ತಮ್ಮ ಯೂನಿಟನ್ನು ರಕ್ಷಣೆ ಮಾಡಬೇಕಾಗಿತ್ತು. ಕ್ವಿಕ್‌ ರಿಯಾಕ್ಷನ್‌ ಟೀಮ್‌ ದಾಳಿ ನಡೆಸಿದ ಉಗ್ರರ ಬೆನ್ನು ಹತ್ತಿತು. ದೇಶ ಮರೆಯದ ಈ ಉಗ್ರ ದಾಳಿಯಲ್ಲಿ 19 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅದರ ಭೀಕರತೆ ಇನ್ನೂ ಕಣ್ಣಿಂದ ಮಾಸಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ವಿಶ್ವನಾಥ್‌.

ಉರಿ ಘಟನೆ ನಡೆದು ಕೆಲವೇ ದಿನಗಳಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲಾಯಿತು. ಇದರ ಸುಳಿವು ಸ್ವತಃ ಸೇನೆಯಲ್ಲಿ ಇದ್ದವರಿಗೂ ಇರಲಿಲ್ಲ. ಯಾವುದೇ ಸಂದರ್ಭ ಎದುರಾಗಬಹುದು, ಸಿದ್ಧರಾಗಿರಿ ಎಂಬ ಮಾಹಿತಿಯನ್ನಷ್ಟೇ ನೀಡಲಾಗಿತ್ತು ಎಂಬುದಾಗಿ ಅಂದಿನ ಸ್ಥಿತಿಯನ್ನು ಮೆಲುಕು ಹಾಕಿದರು. ಅನಂತರದ ದಿನಗಳಲ್ಲಿ ಅಂದು ನಡೆದ ಸರ್ಜಿಕಲ್‌ ಸ್ಟ್ರೈಕ್‌ ಕುರಿತಾಗಿ ಮಾಹಿತಿ ದೊರಕಿತ್ತು ಎಂದರು.

2014ರ ಡಿಸೆಂಬರ್‌ನಲ್ಲೂ ಉರಿಯ ಮೊರಕಾಂಡ್‌ನ‌ಲ್ಲಿ ಇಂಥದೇ ದಾಳಿ ಯಾಗಿತ್ತು. ಮುಂಜಾನೆ 5 ಗಂಟೆಯ ಹೊತ್ತಿಗೆ ಐವರು ಉಗ್ರರು ಕೃತ್ಯ ಎಸಗಿದ್ದರು. ಏಳು ಸೈನಿಕರು ಹುತಾತ್ಮರಾಗಿದ್ದರು. ಸಾಮಾನ್ಯವಾಗಿ ನಾವೆಲ್ಲ ಜತೆಯಾಗಿ ಊಟ ಮಾಡುತ್ತಿದ್ದ ಕ್ಯಾಂಟೀನ್‌ನ ಜಾಗವನ್ನೇ ಕೇಂದ್ರೀಕರಿಸಿ ದಾಳಿ ನಡೆದಿತ್ತು. ಆದರೆ ಎರಡನೇ ದಾಳಿಯ ಸಂದರ್ಭ ನಾನು ರಜೆ ಇದ್ದುದರಿಂದ ಊರಿಗೆ ಬಂದು ಮನೆಯಲ್ಲಿದ್ದೆ. ಟಿವಿಯಲ್ಲಿ ಸುದ್ದಿ ನೋಡಿದಾಗ ಒಂದು ಕ್ಷಣ ಆತಂಕಕ್ಕೆ ಈಡಾಗಿದ್ದೆ ಎನ್ನುತ್ತಾರೆ ವಿಶ್ವನಾಥ್‌.

Advertisement

ಸೇನೆಗೆ ನೇಮಕ
ವಿಶ್ವನಾಥ್‌ 2002ರ ಮಾರ್ಚ್‌ 14ರಂದು ಮಂಗಳೂರಿನಲ್ಲಿ ನಡೆದ ಸೇನೆಯ ನೇಮಕಾತಿ ಶಿಬಿರದಲ್ಲಿ ಆಯ್ಕೆಯಾದರು. ಉತ್ತಮ ದೇಹದಾಡ್ಯìವಿದ್ದ ಕಾರಣ ನೇಮಕಾತಿ ಸುಲಭವಾಯಿತು. ಇದಕ್ಕೆ ಹಿಂದೆ ಎಸೆಸೆಲ್ಸಿ ಮುಗಿಸಿ, ಜೆಒಸಿ ವ್ಯಾಸಂಗಕ್ಕೆ ಸೇರಿದಾಗಲೇ ಮನೆಗೆ ಆಧಾರಸ್ತಂಭವಾಗಿದ್ದ ತಂದೆ ಜತ್ತಪ್ಪ ಪೂಜಾರಿ ವಿಧಿವಶರಾಗಿದ್ದರು. ಅನಂತರ ಅಣ್ಣ ಮತ್ತು ತಮ್ಮ ವಿಶ್ವನಾಥ್‌ ಮನೆಯ ನೊಗ ಹೊತ್ತರು. ಸೇನೆಯ ಆಕರ್ಷಣೆ ಹೊಂದಿದ್ದ ವಿಶ್ವನಾಥ್‌ ಮೊದಲ ಪರೀಕ್ಷೆಯಲ್ಲಿಯೇ ಯಶಸ್ವಿಯಾದರು. ಅಣ್ಣ, ಅಮ್ಮನ ಜತೆ ಅಕ್ಕಳ ನೈತಿಕ ಬೆಂಬಲವೂ ಇತ್ತು. ಕೇವಲ ಉದ್ಯೋಗದ ಅನಿವಾರ್ಯತೆಯೊಂದೇ ವಿಶ್ವನಾಥ್‌ ಅವ ರನ್ನು ಸೇನೆ ಸೇರುವಂತೆ ಮಾಡಿದ್ದಲ್ಲ. ಅವರಿಗೆ ಎಳವೆಯಿಂದಲೇ ಪೊಲೀಸ್‌ ಅಥವಾ ಸೇನೆ ಸೇರುವ ಕನಸಿತ್ತು. ಆದರೆ ದಾರಿ ತಿಳಿದಿರಲಿಲ್ಲ. ಜೆಒಸಿ ವ್ಯಾಸಂಗ ಮಾಡುತ್ತಿದ್ದಂತೆ ಸೇನಾ ನೇಮ ಕಾತಿಯ ಪ್ರಕಟನೆ ನೋಡಿ, ಅತ್ತ ತೆರಳಿದರು.

ಶಾಂತಿಗೋಡು ಮುಂಡೋಡಿ ನಿವಾಸಿಯಾಗಿರುವ ವಿಶ್ವನಾಥ್‌, ಪ್ರಾಥಮಿಕ ಶಿಕ್ಷಣವನ್ನು ಆನಡ್ಕ ಹಿ.ಪ್ರಾ. ಶಾಲೆಯಲ್ಲಿ ಪಡೆದರು. ಸರ್ವೆ ಭಕ್ತಕೋಡಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು, ನೆಹರೂನಗರ ವಿವೇಕಾನಂದ ಕಾಲೇಜಿನಲ್ಲಿ ಜೆಒಸಿಗೆ ಸೇರಿದ್ದರು. 

ಈಗ ತಾಯಿ ಪುಷ್ಪಾವತಿ, ಪತ್ನಿ ಚೇತನಾ ಎಂ., ಮಕ್ಕಳಾದ ದೈವಿಕ್‌, ಲಾಸ್ಯ ಜತೆಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

ಬಾರಾಮುಲ್ಲಾ ದಾಳಿ
ಉಗ್ರರ ಹಲವು ದಾಳಿ ಘಟನೆಗಳು ವಿಶ್ವನಾಥ್‌ ನೆನಪಿನಲ್ಲಿ ಸದಾ ಕೆಂಪಗೆ ಇವೆ. 2016ರ ಆ. 16ರಂದು ಬಾರಾಮುಲ್ಲಾದ ಬೆಂಗಾವಲು ಪಡೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ರಾತ್ರಿ ಸುಮಾರು 2.30ಕ್ಕೆ ದಾಳಿ ನಡೆದ ನೆನಪು. ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದೆ, ಘಟನೆಯನ್ನು ಸಮೀಪದಿಂದಲೇ ಕಂಡಿದ್ದೇನೆ. ಸೈನಿಕರನ್ನು ಹೊತ್ತು ಬರುತ್ತಿದ್ದ ವಾಹನದ ಟಯರ್‌ ಪಂಕ್ಚರ್‌ ಆಗಿತ್ತು. ಆದರೂ ಚಾಲಕ ರಿಮ್‌ನಲ್ಲೇ ವಾಹನವನ್ನು ಚಲಾಯಿಸಿ, ಸೈನಿಕರ ಜೀವ ಉಳಿಸಿದ್ದ. ಓರ್ವ ಸೈನಿಕನಿಗೆ ಮಾತ್ರ ಸಣ್ಣ ಗಾಯವಾಗಿತ್ತು. ಆದರೆ ಲಾರಿ ಜತೆಗೆ ಬರುತ್ತಿದ್ದ ಜೀಪಿನ ಮೇಲೆ ನಾಲ್ವರು ಉಗ್ರರು ಗುಂಡಿನ ಸುರಿಮಳೆಗೈದಿದ್ದರು. ಇಬ್ಬರು ಸೈನಿಕರು ಹುತಾತ್ಮರಾಗಿದ್ದರು- ವಿವರಿಸುತ್ತಾರೆ ವಿಶ್ವನಾಥ್‌.

ಇದಾಗಿ ಒಂದು ತಿಂಗಳ ಬೆನ್ನಿಗೇ ಮತ್ತೆ ಸೇನೆಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಯಿತು. ಇದೂ ಕೂಡ ರಾತ್ರಿಯೇ ನಡೆದ ದಾಳಿ. ಬಿಎಸ್‌ಎಫ್‌ ಯೋಧ ಹುತಾತ್ಮ ನಾಗಿದ್ದರು ಎನ್ನುತ್ತಾರೆ ವಿಶ್ವನಾಥ್‌.

ಉತ್ತರಾಖಂಡ್‌ನ‌ಲ್ಲಿ 2013ರಲ್ಲಿ ಜಲಪ್ರಳಯ ನಡೆದಾಗ ರಕ್ಷಣಾ ಕಾರ್ಯಾಚರಣೆಯಲ್ಲಿ ತಾನು ಭಾಗಿಯಾಗಿದ್ದುದು ಹೆಮ್ಮೆ ತರುವ ಸಂಗತಿ ಎನ್ನುತ್ತಾರೆ ವಿಶ್ವನಾಥ್‌.

ಸುದೀರ್ಘ‌ ಸೇನಾ ಸೇವೆ
2002ರ ಡಿ. 14ರಂದು ಸೇನೆಗೆ ಸೇರಿದ ವಿಶ್ವನಾಥ್‌ ಮಾ. 16ರಿಂದ ನ. 10ರ ವರೆಗೆ ಹೈದರಾ ಬಾದ್‌ನ ಆರ್ಟಿ ಸೆಂಟರ್‌ನಲ್ಲಿ ತರಬೇತಿ ಪಡೆದರು. ಡಿಸೆಂಬರ್‌ನಲ್ಲಿ ಸಿಕ್ಕಿಂನ ಮೈಲ್‌ 5ರಲ್ಲಿ ನೇಮಕಗೊಂಡರು. 2003ರ ಮಾರ್ಚ್‌ನಿಂದ 2006ರ ಡಿಸೆಂಬರ್‌ ವರೆಗೆ ಪಂಜಾಬ್‌ನ ಫರೀದಾಕೋಟ್‌, 2010ರ ಜೂನ್‌ ವರೆಗೆ ಮಹಾರಾಷ್ಟ್ರದ ದೇವ್‌ಲಾಲ್‌, 2013ರ ಆಗಸ್ಟ್‌ವರೆಗೆ ಉತ್ತರಾಖಂಡ್‌ನ‌ ರೈವಾಲಾ, 2016ರ ಡಿಸೆಂಬರ್‌ ವರೆಗೆ ಜಮ್ಮು ಕಾಶೀ¾ರದ ಉರಿ, 2018ರ ಜೂನ್‌ವರೆಗೆ ದಿಲ್ಲಿಯ ಸೇನಾ ಕೇಂದ್ರ ಕಚೇರಿ ಹಾಗೂ ಈಗ ರಾಜಸ್ಥಾನದ ಬಿಕಾ ನೇರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 17 ವರ್ಷಗಳ ಸೇನಾಸೇವೆಯನ್ನು ಖುಷಿಯಿಂದಲೇ ನಿರ್ವಹಿಸಿದ್ದೇನೆ. ದೇಶ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದು ಕಷ್ಟ ಎನ್ನುತ್ತಾರೆ ವಿಶ್ವನಾಥ್‌.

ಕೆಲಸ ಪ್ರೀತಿಸಿದರೆ ಕಷ್ಟವಲ್ಲ
ಆರ್ಮಿಯ ಕೆಲಸ ಕಷ್ಟ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಕಷ್ಟ  ಎಲ್ಲ ಕ್ಷೇತ್ರಗಳಲ್ಲಿಯೂ ಇದ್ದದ್ದೇ. ತರಬೇತಿ ಅವಧಿಯಲ್ಲಿ ಸ್ವಲ್ಪ ಕಷ್ಟ ಅನಿಸುತ್ತದೆ. ಬಳಿಕ ಹಾಗಿಲ್ಲ. ಕೆಲಸವನ್ನು ನಾವು ಪ್ರೀತಿಸಬೇಕು, ಸಂಭ್ರಮದಿಂದ ಮಾಡಬೇಕು. ಆಗ ಯಾವುದೇ ಕೆಲಸವೂ ಸುಲಭ ಆಗುತ್ತದೆ. ಸೈನ್ಯದಲ್ಲೂ ಸಂಭ್ರಮ ಪಡುವ ಅವಕಾಶ ಸಾಕಷ್ಟು ಸಿಗುತ್ತವೆ. ಯುವಕರು ಹೆಚ್ಚು ಸಂಖ್ಯೆಯಲ್ಲಿ  ಸೇನೆಗೆ ಸೇರಬೇಕು.
– ವಿಶ್ವನಾಥ್‌ ಎಂ. ಹವಾಲ್ದಾರ್‌, ಭಾರತೀಯ ಸೈನ್ಯ

ಸೈನಿಕ ಪತಿಯನ್ನೇ ಬಯಸಿದ್ದೆ
ಮೊದಲಿನಿಂದಲೂ ನನಗೆ ಆರ್ಮಿ ಎಂದರೆ ಇಷ್ಟ, ಗೌರವ. ನನ್ನ ಅಣ್ಣ ಹಾಗೂ ಭಾವ ಸೇನೆಯಲ್ಲಿ ಇರುವುದು ಇದಕ್ಕೆ ಕಾರಣ. ಪತಿಯೂ ಸೈನಿಕನಾಗಿರಲಿ ಎಂಬ ಮನಸ್ಸಿತ್ತು, ಅಂಥದ್ದೇ ಪ್ರಪೋಸಲ್‌ ಬಂತು; ಖುಷಿಯಿಂದ ಒಪ್ಪಿಕೊಂಡೆ. 
-ಚೇತನಾ ಎಂ., ಹವಾಲ್ದಾರ್‌ ವಿಶ್ವನಾಥ್‌ ಎಂ. ಅವರ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next