ಹಾವೇರಿ: ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಟದ ಮಧ್ಯೆಯೇ ಜಿಲ್ಲೆಯ ಅಲ್ಲಲ್ಲಿ ಇದೀಗ ಬೆಳೆದು ನಿಂತಿರುವ ಫಸಲುಗಳಿಗೆ ವನ್ಯಜೀವಿಗಳ ಕಾಟ ಶುರುವಾಗಿದ್ದು, ಕೃಷ್ಣ ಮೃಗಗಳ ಹಾವಳಿಯಿಂದ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ರೈತರು ನಿತ್ಯ ಪರದಾಡುವಂತಾಗಿದೆ. ಜೂನ್ ತಿಂಗಳಲ್ಲಿ ಮಳೆಯಿಲ್ಲದ ಕಾರಣ ವಿಳಂಬವಾಗಿ ಬಿತ್ತನೆ ಮಾಡಿದ್ದು, ಈಗ ಮತ್ತೆ ಮಳೆ ಕೈಕೊಟ್ಟಿದೆ. ಇದರಿಂದಾಗಿ ರೈತರು ಚಿಂತೆಗೀಡಾಗಿದ್ದಾರೆ. ಈಗ ಕೃಷ್ಣ ಮೃಗಗಳ ಕಾಟಕ್ಕೆ ರೈತರು ಹೈರಾಣಾಗುತ್ತಿದ್ದಾರೆ.
ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಸಂತಸಗೊಂಡಿದ್ದ ರೈತರು ಬಿತ್ತನೆ ಮಾಡಿ ಮುಗಿಸಿದ್ದರು. ಕಳೆದ 25 ದಿನಗಳಿಂದ ಮತ್ತೆ ಮಳೆ ಮಾಯವಾಗಿದ್ದು, ಪೈರು ಬಾಡುವ ಹಂತಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಮಳೆಯಿಲ್ಲದೇ ಬರಗಾಲದ ಛಾಯೆ ಆವರಿಸಿದೆ.
ಇವುಗಳ ನಡುವೆ ಕಷ್ಟಪಟ್ಟು ರಕ್ಷಿಸಿಕೊಂಡಿರುವ ಬೆಳೆಗೆ ಈಗ ಕೃಷ್ಣಮೃಗಗಳ ಕಾಟ ಶುರುವಾಗಿದೆ. ಅವುಗಳ ಉಪಟಳ ತಡೆಯಲು ಹೊಲದಲ್ಲೇ ಚಪ್ಪರ ಹಾಕಿಕೊಂಡು ಹಗಲು ರಾತ್ರಿ ಕಾಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿತ್ತನೆ ಮಾಡಿದ ಬೀಜ ಚಿಗುರೊಡೆದು ಎರಡು ಎಲೆ ಮಾಡುತ್ತಲೇ ಕೃಷ್ಣಮೃಗ, ಜಿಂಕೆಗಳ ಹಿಂಡು ಹೊಲಕ್ಕೆ ದಾಳಿ ಇಡುತ್ತಿವೆ. ಬೆಳೆ ಉಳಿಸಿಕೊಳ್ಳುವುದೇ ಇಲ್ಲಿಯ ರೈತರಿಗೆ ಸವಾಲಾಗಿದೆ. ಕೆಲ ದಿನಗಳ ಹಿಂದೆ ಜಿÇÉೆಯಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ರೈತರು ಹೊಲಗಳಲ್ಲಿ ಬಿತ್ತನೆ ಮಾಡಿದ್ದಾರೆ. ಮೆಕ್ಕೆಜೋಳ, ಶೇಂಗಾ, ಹತ್ತಿ, ಹೆಸರು, ಸೋಯಾಬೀನ್ ಬೀಜ ಬಿತ್ತನೆಯಾಗಿದೆ.
ಅವು ಚಿಗುರೊಡೆದು ಬೆಳೆಯುತ್ತಿದ್ದಂತೆ ಜಿಂಕೆಗಳ ಹಿಂಡು ದಾಂಗುಡಿ ಇಡುತ್ತಿವೆ. 15-20 ಕ್ಕೂ ಹೆಚ್ಚು ಜಿಂಕೆಗಳಿರುವ ಒಂದೊಂದು ಹಿಂಡು ಹೊಲಕ್ಕೆ ನುಗ್ಗಿದರೆ ಗಂಟೆಯೊಳಗೆ ಎಕರೆಗಟ್ಟಲೆ ಹೊಲದಲ್ಲಿ ಬೆಳೆದ ಹಸಿರು ಪೂರ್ತಿ ಮಾಯವಾಗುತ್ತವೆ. ಚಿಗುರು ಎಲೆಗಳನ್ನು ಸಂಪೂರ್ಣವಾಗಿ ಜಿಂಕೆಗಳು ತಿಂದುಹಾಕುತ್ತಿವೆ. ಕೆಲವು ಬಾರಿ ರಾತ್ರಿ ವೇಳೆ ಹಿಂಡು ನುಗ್ಗಿ ಬೆಳಗಾಗುವುದರೊಳಗೆ ಬೆಳೆ ಹಾಳು ಮಾಡುತ್ತಿವೆ. ಹೊಲದಲ್ಲೆಲ್ಲ ಓಡಾಡಿ ಸಸಿಗಳನ್ನು ಕಿತ್ತು ಹಾಕುತ್ತಿವೆ.
ಇದರಿಂದ ಎಕರೆಗೆ ಹತ್ತಾರು ಸಾವಿರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಇನ್ನೊಂದು ವಾರದೊಳಗೆ ಮಳೆಯಾದರೆ ಬೆಳೆ ನಿರೀಕ್ಷೆ ಮಾಡಬಹುದಾಗಿದೆ. ತಡವಾಗಿ ಬಿತ್ತನೆಯಾಗಿರುವುದರಿಂದ ಈ ಹಂತದಲ್ಲಿ ಮಳೆಯಾದರೆ ಮಾತ್ರ ಫಸಲು ಬರುತ್ತದೆ. ಈ ಆತಂಕದಲ್ಲಿರುವ ರೈತರಿಗೆ ಕೃಷ್ಣಮೃಗಗಳ ಹಾವಳಿಯಿಂದ ಮತ್ತೊಂದು ತಲೆನೋವು ಶುರುವಾಗಿದೆ. ಅವುಗಳಿಂದ ಬೆಳೆ ಸಂರಕÒಣೆ ಹೇಗೆ ಮಾಡಿಕೊಳ್ಳುವುದು ಎಂಬ ಚಿಂತೆ ರೈತರದ್ದಾಗಿದೆ.
ಎಂಟು ಸಾವಿರಕ್ಕೂ ಅಧಿಕ ಕೃಷ್ಣಮೃಗಗಳು
ರಾಣಿಬೆನ್ನೂರು ಬಳಿ ಕೃಷ್ಣಮೃಗಗಳ ವನ್ಯಧಾಮವಿದ್ದು, ಅವುಗಳ ಸಂತತಿ ಈಗ 8 ಸಾವಿರಕ್ಕೂ ಮಿಕ್ಕಿದೆ. ಮಳೆ ಬಿದ್ದು ಹಸಿರು ಚಿಗುರಿರುವುದರಿಂದ ಅವು ಸುತ್ತಮುತ್ತಲಿನ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಜಿಂಕೆಗಳ ಉಪಟಳದಿಂದ ಹಾವೇರಿ, ರಾಣಿಬೆನ್ನೂರು, ಸವಣೂರು, ಹಿರೇಕೆರೂರು, ಬ್ಯಾಡಗಿ, ಗದಗ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲೂ ಜಿಂಕೆ ಹಾವಳಿ ಜೋರಾಗಿದೆ. ಅದರಲ್ಲೂ ಹಾವೇರಿ ಸುತ್ತಮುತ್ತಲಿನ ಗ್ರಾಮಗಳ ಹೊಲಗಳಿಗೆ ಜಿಂಕೆಗಳು ನುಗ್ಗುವುದು ಮಾಮೂಲಿಯಂತಾಗಿದೆ. ಆದ್ದರಿಂದ, ಜಿಂಕೆಗಳನ್ನು ಬೆದರಿಸಲೆಂದೇ ಒಬ್ಬರು ಹೊಲದಲ್ಲಿ ಚಪ್ಪರ ಹಾಕಿಕೊಂಡು ಕೂರುತ್ತಿದ್ದಾರೆ. ಹಿಂದೆಲ್ಲ ಮನುಷ್ಯರನ್ನು ಕಂಡರೆ ಓಡಿ ಹೋಗುತ್ತಿದ್ದ ಜಿಂಕೆಗಳು ಈಗ ಧೈರ್ಯದಿಂದ ಹೊಲಕ್ಕೆ ನುಗ್ಗುತ್ತಿವೆ. ಕೃಷ್ಣಮೃಗಗಳು ಹಸಿರು ಹುಲ್ಲು, ಕುರುಚಲು ಹುಡುಕಿಕೊಂಡು ಹೋಗುತ್ತವೆ. ವನ್ಯಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಸೋಲಾರ್ ತಂತಿ ಬೇಲಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ. ನ್ಯಜೀವಿಗಳಿಂದ ಬೆಳೆ ನಷ್ಟವಾದರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.