ಹಾವೇರಿ: ಹೆದ್ದಾರಿ ಮಾಡುತ್ತೇವೆ ಎಂದಾಗ ಗ್ರಾಮಸ್ಥರು ಭೂಮಿ ಕೊಟ್ಟರು. ಆದರೆ, ಅದೇ ಹೆದ್ದಾರಿ ಈಗ ಗ್ರಾಮಸ್ಥರ ಪ್ರಾಣವನ್ನೇ ಕೇಳುತ್ತಿದೆ! ನಿತ್ಯ ಜೀವ ಕೈಯಲ್ಲಿ ಹಿಡಿದು ಹೆದ್ದಾರಿಯಲ್ಲಿಯೇ ಸಂಚರಿಸುವ ದೌರ್ಭಾಗ್ಯ ಗ್ರಾಮಸ್ಥರದ್ದು.
ಇದು ತಾಲೂಕಿನ ನೆಲೋಗಲ್ಲ ಗ್ರಾಮಸ್ಥರ ನಿತ್ಯದ ಗೋಳು. ಕಳೆದ ಏಳೆಂಟು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾಡಲು ನೆಲೋಗಲ್ಲ ಗ್ರಾಮಸ್ಥರು ತಮ್ಮ 60 ಎಕರೆ ಭೂಮಿ ಕೊಟ್ಟು ಅಭಿವೃದ್ಧಿಗೆ ಸಹಕರಿಸಿದ್ದರು. ಅಭಿವೃದ್ಧಿಗೆ ತಾವೂ ಕೈಜೋಡಿಸಿದ್ದೇವೆ ಎಂಬ ನೆಮ್ಮದಿ ಅವರಲ್ಲಿತ್ತು. ಆದರೆ, ಹೆದ್ದಾರಿಯಿಂದಾಗುತ್ತಿರುವ ತೊಂದರೆಯಿಂದಾಗಿ ಈಗ ಗ್ರಾಮಸ್ಥರ ನೆಮ್ಮದಿಯೇ ಹಾಳಾಗಿ ಹೋಗಿದೆ.
ಅಭಿವೃದ್ಧಿಗೆ ಸಹಕರಿಸಿದ ತಪ್ಪಿಗೆ ನಾಲ್ಕು ವರ್ಷಗಳಲ್ಲಿ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾಗಿ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಐವರು ಮಕ್ಕಳು, ಐವರು ಮಹಿಳೆಯರು ಸೇರಿದ್ದಾರೆ. ಆಕಳು, ಎತ್ತು, ಎಮ್ಮೆ, ಕುರಿಗಳ ಸಾವಿಗಂತೂ ಲೆಕ್ಕವೇ ಇಲ್ಲ. ಅಪಘಾತದಲ್ಲಿ ಗಾಯಗೊಂಡವರು ನೋವಲ್ಲೇ ದಿನ ದೂಡುತ್ತಿದ್ದಾರೆ. ಇಷ್ಟೆಲ್ಲ ದುರಂತಕ್ಕೆ ಕಾರಣ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಗ್ರಾಮಸ್ಥರ ಪಾಲಿಗೆ ಹೆಮ್ಮಾರಿಯಾಗಿ ಕಾಡುತ್ತಿದೆ.
ಕೈಯಲ್ಲಿ ಜೀವ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಿಸುವಾಗ ನೆಲೋಗಲ್ಲ ಗ್ರಾಮದ ಬಳಿ ಸಮರ್ಪಕ ಸೇವಾರಸ್ತೆ ಮತ್ತು ಕೆಳಸೇತುವೆ ನಿರ್ಮಿಸದಿರುವುದೇ ಇಷ್ಟೆಲ್ಲ ತೊಂದರೆಗೆ ಕಾರಣವಾಗಿದೆ. ಹೆದ್ದಾರಿಗೆ ಹೊಂದಿಕೊಂಡು ಸೇವಾ ರಸ್ತೆ ಇಲ್ಲದೇ ಇರುವುದರಿಂದ ಗ್ರಾಮಸ್ಥರು ಗ್ರಾಮದ ಹಳೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಓಡಾಡುವ ಸ್ಥಿತಿ ಇದೆ. ಕೆಳ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಅತ್ತಿತ್ತ ನೋಡುತ್ತ ಜೀವ ಕೈಯಲ್ಲಿ ಹಿಡಿದುಕೊಂಡೇ ಭರ್ರ… ಎಂದು ಬರುವ ವಾಹನ ಸಂಚಾರದ ಹೆದ್ದಾರಿ ದಾಟಬೇಕಾಗಿದೆ. ಹೀಗೆ ದಾಟುವಾಗಲೇ ಬಹಳಷ್ಟು ಅಪಘಾತಗಳು ಸಂಭವಿಸಿ, ಹಲವು ಪ್ರಾಣಪಕ್ಷಿ ಹಾರಿ ಹೋಗಿವೆ.
ಹೆದ್ದಾರಿ ಆಚೆಗೆ ಕಲ್ಲಿಹಾಳ, ವೀರಾಪುರ ಗ್ರಾಮಗಳಿವೆ. ಆ ಗ್ರಾಮಕ್ಕೆ ಹೋಗುವಾಗ ಹೆದ್ದಾರಿ ದಾಟಿಯೇ ಹೋಗಬೇಕು. ಹೆದ್ದಾರಿ ಆಚೆಗೆ ಹಳ್ಳವೊಂದಿದ್ದು ನೀರಿಗಾಗಿ, ಬಟ್ಟೆ ತೊಳೆಯಲು, ಬಹಿರ್ದೆಸೆಗೆ ಮಕ್ಕಳು, ಮಹಿಳೆಯರಾದಿಯಾಗಿ ಬಹುತೇಕರು ಅಲ್ಲಿ ಹೋಗುತ್ತಾರೆ. ಹೀಗೆ ಹೋಗುವಾಗ ಹೆದ್ದಾರಿ ದಾಟುವುದು ಅನಿವಾರ್ಯ. ಈ ಸಂದರ್ಭದಲ್ಲಿಯೇ ಜನ, ಜಾನುವಾರು, ಚಕ್ಕಡಿ, ಟ್ರ್ಯಾಕ್ಟರ್‌ಗಳು ಅಪಘಾತಕ್ಕೊಳಗಾಗಿ ಹಲವರ ಜೀವಕ್ಕೆ ಕುಂದುಂಟಾಗಿದೆ. ಹೆದ್ದಾರಿಗೆ ಹೊಂದಿಕೊಂಡು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಮಕ್ಕಳು ಆಟೋಟ ಸಂದರ್ಭದಲ್ಲಿ ಅರಿವಿಲ್ಲದೆ ಹೆದ್ದಾರಿಗೆ ಬರುತ್ತಾರೆ. ಪಾಲಕರಿಗಂತೂ ಹೆದ್ದಾರಿಯೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೊಳಚೆ ಹೊಂಡ: ರಾ.ಹೆ. ಪ್ರಾ ಧಿಕಾರದವರು ಗ್ರಾಮದಿಂದ ಸ್ವಲ್ಪ ದೂರದಲ್ಲಿ ಕೆಳ ಸೇತುವೆಯೇನೋ ನಿರ್ಮಿಸಿದೆ. ಆದರೆ, ಅದೂ ಓಡಾಡಲು ರಸ್ತೆ ಇಲ್ಲದೇ ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಕೆಳಸೇತುವೆ ತುಂಬೆಲ್ಲ ಆಳೆತ್ತರ ಕೊಳಚೆ ನೀರು ತುಂಬಿದೆ. ಕೆಳಸೇತುವೆಯ ಎತ್ತರ ತೀರಾ ಕಡಿಮೆಯಿದ್ದು, ಬೆಳೆ ತುಂಬಿದ ಚಕ್ಕಡಿ, ಟ್ರ್ಯಾಕ್ಟರ್ ಓಡಾಡಲು ಆಗದು. ಹೀಗಾಗಿ ಈ ಕೆಳಸೇತುವೆ ಇದ್ದೂ ಇಲ್ಲದಂತಾಗಿದೆ.
ಬರೀ ಭರವಸೆ: ರಾಷ್ಟ್ರೀಯ ಹೆದ್ದಾರಿಯಿಂದಾಗುತ್ತಿರುವ ಅವಘಡ ತಪ್ಪಿಸಲು ಕೂಡಲೇ ಸೇವಾರಸ್ತೆ ಮತ್ತು ಸಮರ್ಪಕ ಕೆಳಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಐದಾರು ಬಾರಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿ ಬಾರಿಯೂ ಅಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದವರು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಯಾವ ಭರವಸೆಯೂ ಅನುಷ್ಠಾನಕ್ಕೆ ಬಂದಿಲ್ಲ. ಇದರಿಂದ ಕೆರಳಿರುವ ಗ್ರಾಮಸ್ಥರು ಈಗ ಅಧಿಕಾರಿಗಳಿಗೆ ಕಾಲಮಿತಿ ಗಡುವು ನೀಡಿ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ದಿವ್ಯ ನಿರ್ಲಕ್ಷ್ಯ
ಅಪಘಾತ ನಡೆದಾಗೊಮ್ಮೆ ಪ್ರತಿಭಟನೆ, ಭರವಸೆ ಮಾಮೂಲಿ ಆಗಿದೆ. ನಂತರ ಅಧಿಕಾರಿಗಳು ನಾಪತ್ತೆಯಾಗುವರು. ಈಗ ಹೆದ್ದಾರಿಯನ್ನು ಚತುಷ್ಪಥ ಮಾಡುವುದಾಗಿ ಹೇಳುತ್ತಿದ್ದಾರೆ. ಮತ್ತೆ ಭೂಮಿ ಕೊಡಬೇಕು. ಆಗಲೂ ಸರಿಯಾದ ಸರ್ವಿಸ್ ರಸ್ತೆ ಮಾಡದಿದ್ದರೆ ಮತ್ತೆದೇ ತೊಂದರೆ ಮುಂದುವರಿಯುವ ಆತಂಕ.
. ಮಂಜುನಾಥಸ್ವಾಮಿ ಹಿರೇಮಠ,
ನೆಲೋಗಲ್ಲ ಗ್ರಾಮಸ್ಥ
ಎಚ್.ಕೆ. ನಟರಾಜ