Advertisement

ಯೋಗ ದಿನಾಚರಣೆಗೆ ಸಕಲ ಸಿದ್ಧತೆ

03:08 PM Jun 13, 2019 | Naveen |

ಹಾವೇರಿ: ವಿಶ್ವ ಯೋಗ (ಜೂನ್‌ 21) ದಿನವನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆ ನಡೆಸಿದೆ.

Advertisement

ಜಿಲ್ಲಾ ಕೇಂದ್ರದಲ್ಲಿ ಯೋಗ ಜಾಥಾ ಹಾಗೂ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಡಳಿತ ನಿರ್ಣಯಿಸಿದೆ. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಯೋಗ ತರಬೇತಿ ನೀಡಲು ನಿರ್ಧರಿಸಿದ್ದು ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿ ಎಲ್ಲ ಶಾಲೆಗಳಲ್ಲಿ ಆರರಿಂದ 10ನೇ ತರಗತಿ ಮಕ್ಕಳಿಗೆ ಜೂ. 21ರ ವರೆಗೆ ಯೋಗ ತರಬೇತಿ ನೀಡಲಾಗುತ್ತಿದೆ.

ಪ್ರತಿದಿನ ಬೆಳಗ್ಗೆ 7ಗಂಟೆಯಿಂದ 9ರ ವರೆಗೆ ಯೋಗ ತರಬೇತಿ ನೀಡಲು ಇಲಾಖೆ ಶಾಲೆಯ ದೈಹಿಕ ಶಿಕ್ಷಕರಿಗೆ ಹಾಗೂ ಯೋಗ ತರಬೇತಿ ಪಡೆದ ಸಹಶಿಕ್ಷಕರಿಗೆ ಸೂಚಿಸಿದೆ. ತರಬೇತಿಯಲ್ಲಿ ಪ್ರತಿದಿನ ಯೋಗದ ಬಗ್ಗೆ ಮೂರು ನಿಮಿಷ ಪರಿಚಯ, ಒಂದು ನಿಮಿಷ ಸಿದ್ಧತೆ, ಯೋಗದ ಬಗ್ಗೆ ಎರಡು ನಿಮಿಷ ಸೂಚನೆ, 10 ನಿಮಿಷ ಉಸಿರಾಟ ಅಭ್ಯಾಸ, ಲಘು ವ್ಯಾಯಾಮ ಬಳಿಕ ನಿಂತು ಮಾಡುವ ಆಸನ, ಕುಳಿತು ಮಾಡುವ ಆಸನ, ಮುಂಬಾಗಿ ಮಾಡುವ ಆಸನ, ವಿಶ್ರಾಂತಿಪ್ರದಾಯಕ ಆಸನ, ಧ್ಯಾನಾತ್ಮಕ ಆಸನಗಳನ್ನು ಮಾಡಿಸಬೇಕು ಎಂದು ಯೋಗ ಶಿಕ್ಷಕರಿಗೆ ಸೂಚಿಸಿದೆ.

ಸಾಮೂಹಿಕ ಯೋಗ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್‌ ಇಲಾಖೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಜೂ. 21 ರಂದು ಬೆಳಗ್ಗೆ 7 ಗಂಟೆಗೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸ್ಥಳೀಯ ಯೋಗ ಪಟುಗಳ ಮಾರ್ಗದರ್ಶನದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ, ಶಿಬಿರಾರ್ಥಿಗಳಿಂದ ಯೋಗ ಪ್ರದರ್ಶನ ನೀಡಲು ತೀರ್ಮಾನಿಸಿದೆ. ಜೂ. 19ರಂದು ಜಿಲ್ಲಾ ಕೇಂದ್ರದಲ್ಲಿ ಯೋಗ ಜಾಗೃತಿ ಜಾಥಾ ನಡೆಸಲು ಸಹ ನಿರ್ಧರಿಸಿದೆ.

ಯೋಗ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಜಾಪ್ರಿತ ಬ್ರಹ್ಮಕುಮಾರಿ ವಿದ್ಯಾಲಯದ ಸದಸ್ಯರು, ತರಬೇತಿ ಪಡೆಯುತ್ತಿರುವ ಕಿರಿಯ ಆರೋಗ್ಯ ಸಹಾಯಕರು, ಯೋಗ ತರಬೇತಿ ಹೊಂದಿದ ದೈಹಿಕ ಶಿಕ್ಷಕರು ಹಾಗೂ ಆಸಕ್ತ ಸಾರ್ವಜನಿಕರು ಸೇರಿ 1,500 ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೇ ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಯೋಗ ದಿನಾಚರಣೆ ಆಚರಿಸುವ ಮೂಲಕ ಸಾರ್ವಜನಿಕರಿಗೆ ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

Advertisement

ಒಟ್ಟಾರೆ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ವಿವಿಧ ಯೋಗ ಪ್ರಚಾರ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಜಿಲ್ಲೆಯಾದ್ಯಂತ ‘ಯೋಗಮಯ’ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next