ಹಾವೇರಿ: ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಪೊಲೀಸನೋರ್ವ ಬೈಕ್ ಸಹಿತ ಕೊಚ್ಚಿ ಹೋಗಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕರ್ಜಗಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಯಲ್ಲಪ್ಪ ಕೊರವಿ ಜಲಕಂಟಕದಿಂದ ಪಾರಾಗಿ ಬಂದ ಪೊಲೀಸ್ ಪೇದೆ. ಇವರು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಂತಿಸಿಗ್ಲಿ ಗ್ರಾಮದ ನಿವಾಸಿಯಾಗಿದ್ದು, ಕಾಗಿನೆಲೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಕರ್ತವ್ಯ ಮುಗಿಸಿ ತಾಯಿಯನ್ನು ನೋಡಲು ಸಂತಿಶಿಗ್ಲಿಗೆ ಬೈಕ್ ಮೇಲೆ ಹೊರಟಿದ್ದರು. ಅವರೂರಿಗೆ ತೆರಳಲು ಕರ್ಜಗಿ-ಕಲಕೋಟಿ ಮಾರ್ಗ ಸಮೀಪವಾಗಿದ್ದರಿಂದ ಈ ಮಾರ್ಗದಲ್ಲಿ ಹೋಗಲು ನಿರ್ಧರಿಸಿದ್ದರು.
ಎರಡ್ಮೂರು ದಿನದಿಂದ ನೀರಿನ ಹರಿವು ಸಹ ಕಡಿಮೆಯಾಗಿತ್ತು. ಆಗ ಕೆಲ ವಾಹನಗಳು ಸಹ ಸಂಚಾರ ಆರಂಭಿಸಿದ್ದವು. ಇದನ್ನು ತಿಳಿದ ಯಲ್ಲಪ್ಪ ಕರ್ಜಗಿ ಮಾರ್ಗವಾಗಿಯೇ ಹೊರಟ್ಟಿದ್ದರು. ಆದರೆ, ಮಂಗಳವಾರ ರಾತ್ರಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿತ್ತು. ರಾತ್ರಿ 10.30ರ ವೇಳೆಗೆ ಇವರು ಸೇತುವೆ ಮೇಲೆ ಹೋಗುತ್ತಿದ್ದಂತೆ ನೀರಿನ ಸೆಳೆತಕ್ಕೆ ಆಯತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದರು.
ಬೈಕ್ ಮೇಲಿಂದ ಬೀಳುತ್ತಿದ್ದಂತೆ ಯಲ್ಲಪ್ಪ ವರದಾ ನದಿಯ ಪ್ರವಾಹದ ರಭಸಕ್ಕೆ ಸಿಲುಕಿ ಒಂದು ಕಿಮೀ ದೂರ ಹೋಗಿದ್ದಾರೆ. ವರದಾ ನದಿ ಅಕ್ಕಪಕ್ಕದ ಹೊಲದಲ್ಲೇ ಹರಿಯುತ್ತಿರುವುದರಿಂದ ಇವರು ಎದುರಿಗೆ ಸಿಕ್ಕ ದೊಡ್ಡ ಹುಲ್ಲುಗಡ್ಡೆ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ.
ರೇನ್‌ಕೋಟ್, ಹೆಲ್ಮೆಟ್ ಧರಿಸಿಕೊಂಡಿದ್ದ ಯಲ್ಲಪ್ಪ, ಸುರಕ್ಷಿತವಾಗಿದ್ದ ಮೊಬೈಲ್ ತೆಗೆದು ಸಂಬಂಧಿಕರಿಗೆ ಕರೆ ಮಾಡಿ ನೀರಿನಲ್ಲಿ ಸಿಲುಕಿಕೊಂಡಿರುವ ವಿಷಯ ತಿಳಿಸಿದ್ದಾರೆ. ಸಂಬಂಧಿಕರು, ಪೊಲೀಸರು ರಾತ್ರಿ ವೇಳೆ ಹತ್ತಾರು ಬಾರಿ ಕರೆ ಮಾಡಿ ಇರುವ ಸ್ಥಳ ನಿಖರ ಮಾಡಿಕೊಂಡು ಅವರಿರುವ ಸ್ಥಳ ಪತ್ತೆ ಹಚ್ಚಿದರು. ವಿಷಯ ಹಬ್ಬುತ್ತಿದ್ದಂತೆ ಮಧ್ಯ ರಾತ್ರಿ ಅಕ್ಕಪಕ್ಕದ ಗ್ರಾಮದವರು ಕರ್ಜಗಿ, ಕಲಕೋಟಿ, ಮುಗದೂರು ಗ್ರಾಮದ ನೂರಾರು ಜನ ಸ್ಥಳಕ್ಕೆ ಧಾವಿಸಿದ್ದರು. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಷಯ ತಿಳಿಸಿದ್ದರು. ಟಾರ್ಚ್ ಹಿಡಿದು ಪೋಲಿಸನ ಇರುವಿಕೆ ಪತ್ತೆ ಹಚ್ಚುವಲ್ಲಿ ಸ್ಥಳೀಯರು ಸಹ ಶ್ರಮಿಸಿದರು.
ತುರ್ತು ಸ್ಥಳಕ್ಕಾಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ನೇತೃತ್ವದ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿಗಳ ಎರಡು ತಂಡ ಕರ್ಜಗಿ ಹಾಗೂ ಕಲಕೋಟಿ ಭಾಗದಿಂದ ಹುಡುಕಾಟ ನಡೆಸಿದರು. ರಾತ್ರಿ 2.30ರ ವೇಳೆಗೆ ಹರಸಾಹಸ ಪಟ್ಟು ಪೊಲೀಸ್ ಯಲ್ಲಪ್ಪ ಅವರನ್ನು ರಕ್ಷಿಸುವಲ್ಲಿ ಯಶಸ್ಸಿಯಾದರು.