Advertisement

ಕಾಟಾಚಾರದ ಉದ್ಯೋಗ ಮೇಳಕ್ಕೆ ಆಕ್ರೋಶ

10:52 AM Jan 26, 2019 | |

ಹಾವೇರಿ: ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ಸಂಘಟಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಅಕ್ಷರಶಃ ಕಾಟಾಚಾರದ ಮೇಳದಂತೆ ನಡೆಯಿತು.

Advertisement

ಜಿಲ್ಲಾ ಮಟ್ಟದ ಉದ್ಯೋಗ ಮೇಳವೆಂದರೆ ಉದ್ಯೋಗ ಕೊಡುವ ಉದ್ಯೋಗದಾತರಾದ ನೂರಾರು ಕಂಪನಿಗಳು, ಉದ್ಯೋಗ ಪಡೆಯುವ ಸಾವಿರಾರು ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಬರಬೇಕಿತ್ತು. ಆದರೆ, ಇಲ್ಲಿ ಗರಿಷ್ಠ 15-20 ಕಂಪನಿಗಳು, 100ರಷ್ಟು ಉದ್ಯೋಗಾಕಾಂಕ್ಷಿಗಳು ಮಾತ್ರ ಭಾಗವಹಿಸಿದ್ದವು.

ಅಧಿಕಾರಿಗಳ ಕಾಟಾಚಾರದ ಈ ಮೇಳಕ್ಕೆ ಸಾಕ್ಷಿಯೆಂಬಂತೆ ಮೇಳ ಉದ್ಘಾಟನೆಯ ಸಮಯದಲ್ಲಿ ಉದ್ಯೋಗದಾತರರು ಬಂದು ತಮ್ಮ ಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದರು. 9 ಶಾಲಾ ಕೊಠಡಿ ಹಾಗೂ ಹೊರಗಡೆ ಆವರಣದಲ್ಲಿ ಮೂರು ಮಳಿಗೆಗಳನ್ನು ಮಾತ್ರ ಹಾಕಲಾಗಿತ್ತು. ಇದರಲ್ಲಿಯೇ ಎರಡ್ಮೂರು ಮಳಿಗೆಗಳು ಖಾಲಿ ಇದ್ದವು.

ಉದ್ಯೋಗ ಮೇಳವನ್ನು ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಸಂಘಟಿಸಲಾಗಿತ್ತು. ಮೇಳ ಉದ್ಘಾಟನೆ ವೇಳೆ ಸಂಘಟಕರು ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರನ್ನೆಲ್ಲ ಸಭಾ ಭವನಕ್ಕೆ ಕರೆತಂದು ಕುರ್ಚಿ ತುಂಬಿಸುವ ಕಾರ್ಯಕ್ಕೆ ಹೆಣಗಾಡುತ್ತಿರುವುದು ಕಂಡು ಬಂದಿತು. ಇನ್ನು ಉದ್ಯೋಗ ಮೇಳದಲ್ಲಿ ಮಾರಾಟ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಕಂಪನಿಗಳೇ ಹೆಚ್ಚಿದ್ದವು.

ಈ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌, ಉದ್ಯೋಗ ಮೇಳಗಳು ಕಾಟಾಚಾರದ ಮೇಳಗಳಾಗಬಾರದು. ಮೇಳದಲ್ಲಿ ಭಾಗವಹಿಸಿದ ಎಷ್ಟು ಕಂಪನಿಗಳು ಎಷ್ಟು ಜನರಿಗೆ, ಯಾರಿಗೆ ಉದ್ಯೋಗ ಕೊಟ್ಟಿವೆ ಎಂಬ ಮಾಹಿತಿ ತಮಗೆ ಕೊಡಬೇಕು ಎಂದು ತಾಕೀತು ಮಾಡಿದರು.

Advertisement

ಅದೇ ರೀತಿ ಸ್ಥಳೀಯ ಶಾಸಕ ನೆಹರು ಓಲೇಕಾರ ಸಹ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾ ಮಟ್ಟದ ಉದ್ಯೋಗ ಮೇಳ ಎಂದರೆ ಇಲ್ಲಿ ನಾಲ್ಕೈದು ಸಾವಿರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬೇಕಿತ್ತು. ಇಲ್ಲಿ 500 ಜನರೂ ಇಲ್ಲ. ನಿರುದ್ಯೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಅಧಿಕಾರಿಗಳು ಸರಿಯಾಗಿ ಪ್ರಚಾರ ಮಾಡಬೇಕು. ಸಾಕಷ್ಟು ಪ್ರಚಾರ ಮಾಡದೆ, ಕಾಟಾಚಾರಕ್ಕಾಗಿ ಮೇಳ ಮಾಡಿದರೆ ಸರ್ಕಾರದ ಹಣ ಅಪವ್ಯಯವಾಗುವುದು ಬಿಟ್ಟರೆ ಬೇರೆ ಏನೂ ಆಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next