ಹಾವೇರಿ: ಬೇಸಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಪ್ರತಿ ತಾಲೂಕಿಗೆ 50ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ನೀಡಲಿದೆ. ಜಿಲ್ಲೆಯ ಪ್ರತಿ ತಾಲೂಕುವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗಕ್ಕೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗುರುತಿಸಿ ನೀರು ಪೂರೈಕೆಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧ ಮಾಡಿಕೊಳ್ಳಬೇಕು. ಈ ಹಣವನ್ನು ಪ್ರಸಕ್ತ ಕುಡಿಯುವ ನೀರಿನ ಬೇಡಿಕೆಗಳನ್ನು ಪೂರೈಸಲು ಮಾತ್ರ ಬಳಸಬೇಕು ಎಂದು ಸೂಚಿಸಿದರು.
ಸರ್ಕಾರ ಬರಪೀಡಿತ ತಾಲೂಕುಗಳಿಗೆ ತಲಾ ಒಂದು ಕೋಟಿ ರೂ. ಹಾಗೂ ಇತರ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ 50 ಲಕ್ಷ ರೂ. ನೀಡಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಮುಂಗಾರು ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ರೈತರ ಬೇಡಿಕೆಗೆ ಅನುಸಾರ ಗೊಬ್ಬರ ಮತ್ತು ಬೀಜಗಳನ್ನು ವಿತರಿಸಲು ಕ್ರಮ ವಹಿಸಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಡಿಎಪಿ ಗೊಬ್ಬರದ ಬೇಡಿಕೆ ಇರುವುದರಿಂದ ಈ ಗೊಬ್ಬರ ಖರೀದಿಸಲು ಪೂರೈಸಲು ಸಭೆಯಲ್ಲಿ ಮನವಿ ಮಾಡಿಕೊಂಡರು. ಮಂಗಳ ಕಂಪನಿಯ ಡಿಎಪಿ ಗೊಬ್ಬರ ಪೂರೈಕೆ ಕುರಿತಂತೆ ಕಂಪನಿಗೆ ಪ್ರಸ್ತಾವನೆ ಸಲ್ಲಿಸಿ ಕ್ರಮ ವಹಿಸಲಾಗುವುದು ಹಾಗೂ ಸೋಯಾಬೀನ್ ಬಿತ್ತನೆ ಬೀಜ ಬೇಡಿಕೆ ವಿವರ ಸಲ್ಲಿಸಲು ಸೂಚಿಸಿದರು. ಈ ಕುರಿತಂತೆ ಮಧ್ಯಪ್ರದೇಶದಿಂದ ತರಿಸಿಕೊಳ್ಳಲು ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.