ಹಾವೇರಿ: ವೈದ್ಯಕೀಯ ಕಾರಣ ಹೊರತುಪಡಿಸಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಪ್ರಯಾಣಿಕರು ಜಿಲ್ಲಾ ಗಡಿಯೊಳಗೆ ಬರದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚೆಕ್‌ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸಿ, ಪಾಸ್ ಇಲ್ಲದೆ ಅನಗತ್ಯವಾಗಿ ಜಿಲ್ಲೆಯೊಳಗೆ ಪ್ರವೇಶ ಮಾಡುವವರ ವಾಹನ ವಶಪಡಿಸಿಕೊಳ್ಳಬೇಕು. ಎಲ್ಲ ಚೆಕ್‌ಪೋಸ್ಟ್ ಗಳಲ್ಲೂ ಸಿಸಿ ಕ್ಯಾಮರಾ ಅಳಡಿಸಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಿಗಾ ವಹಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದರು.
ಜಿಲ್ಲಾದ್ಯಂತ ಲಾಕ್‌ಡೌನ್ ವ್ಯವಸ್ಥೆ ಬಿಗಿಗೊಳಿಸಬೇಕು. ರಾತ್ರಿ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಲಾಕ್‌ಡೌನ್ ವ್ಯವಸ್ಥೆ ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಬೇಕು ಎಂದು ತಾಕೀತು ಮಾಡಿದರು. ಜಿಲ್ಲೆಯ ಎಲ್ಲ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು. ಸಾಮಾನ್ಯ ತಪಾಸಣೆ ನಡೆಸದೆ ಸ್ಟೆಥೋಸ್ಕೋಪ್ ಬಳಸಿಯೇ ತಪಾಸಣೆ ನಡೆಸಬೇಕು. ಸಮುದಾಯ ಆರೋಗ್ಯ ತಪಾಸಣೆ ಕಡ್ಡಾಯ. ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಉದಾಸೀನ ಸಲ್ಲ. ಜಿಲ್ಲೆಗೆ ವೈರಾಣು ನುಸುಳದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.
ಬಳ್ಳಾರಿಯಿಂದ ಮೂರು ವೆಂಟಿಲೇಟರ್ ಹಾವೇರಿಗೆ ಮಂಜೂರು ಮಾಡಲಾಗಿದೆ. ಅದನ್ನು ತರಿಸಿಕೊಳ್ಳಬೇಕು. ಸೆಂಟ್ರಲೈಸ್ ಫ್ರೆಜರ್ ಆ್ಯಕ್ಸಿಜನ್ ಸಪ್ಲೈ ಮಾಡುವ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಕನಿಷ್ಠ 40 ಹಾಸಿಗೆ ಚಿಕಿತ್ಸಾ ಸೌಲಭ್ಯ ಜಿಲ್ಲಾ ಕೇಂದ್ರದಲ್ಲಿ ಹಾಗೂ ಐದು ಹಾಸಿಗೆಗಳ ಚಿಕಿತ್ಸಾ ಸೌಲಭ್ಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಖಾಲಿ ಇರುವ ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸರ್ಕಾರಿ ಸೇವೆಗೆ ಒಂದೆರಡು ಪೆಟ್ರೋಲ್ ಬಂಕ್‌ಗಳನ್ನು ಗುರುತಿಸಿ ಪಾಸ್ ಇದ್ದವರಿಗೆ ಮಾತ್ರ ಡಿಸೇಲ್, ಪೆಟ್ರೋಲ್ ನೀಡಬೇಕು. ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ಪದಾರ್ಥಗಳನ್ನು ನೀಡಿ, ರೇಷನ್ ಕಾರ್ಡ್ ಹೊಂದಿದವರಿಗೆ ಓಟಿಪಿಗಾಗಿ ಕಾಯಬೇಡಿ. ಸಹಿ ಮಾಡಿಸಿಕೊಂಡು ಎರಡು ತಿಂಗಳ ರೇಷನ್ ನೀಡಿ ಎಂದು ಸೂಚಿಸಿದರು.
ಪ್ರಸ್ತಾವನೆ ಸಲ್ಲಿಸಿ: ಜಿಲ್ಲೆಗೆ ಹೆಚ್ಚುವರಿ ಉಚಿತ ಹಾಲು ವಿತರಣೆಗೆ ಬೇಕಾದ ಹಾಲಿನ ವಿವರ, ಆಟೋ ಚಾಲಕರು, ಸಲೂನ್ ಶಾಪ್ ಸೇರಿದಂತೆ ವಿವಿಧ ಕಾರ್ಮಿಕ ವರ್ಗಕ್ಕೆ ಹಾಗೂ ವಲಸೆ ಕಾರ್ಮಿಕರಿಗೆ ಬೇಕಾದ ಆಹಾರ ಸಾಮಗ್ರಿಗಳ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ ನೀಡಿದರು. ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಪಂ ಸದಸ್ಯರಾದ ಸಿದ್ಧರಾಜ ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ಡಿಸಿ ಕೃಷ್ಣ ಭಾಜಪೇಯಿ, ಜಿಪಂ ಸಿಇಒ ರಮೇಶ ದೇಸಾಯಿ, ಎಸ್ಪಿ ಕೆ.ಜಿ. ದೇವರಾಜ ಇದ್ದರು.