ಹಾವೇರಿ: ಹೊರ ಜಿಲ್ಲೆಗಳನ್ನು ಸಂಪರ್ಕಿಸುವ ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಬೆಂಗಳೂರಿನಿಂದ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ಸೂಚನೆ ನೀಡಿದರು. ಸರಕು ಸಾಗಾಣಿಕೆ ಹೊರತುಪಡಿಸಿ ಹೊರ ಜಿಲ್ಲೆಯಿಂದ ಪ್ರಯಾಣಿಕರು ಕಾರಣವಿಲ್ಲದೆ ಪ್ರವೇಶಿಸುವ ಕುರಿತಂತೆ ನಿರ್ಬಂಧ ಹೇರಿ ಲಾಕ್‌ಡೌನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಗಡಿಭಾಗದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಚಲನವಲನಗಳ ಬಗ್ಗೆ ತೀವ್ರ ನಿಗಾ ವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವವರ ಮೇಲೆ ತೀವ್ರ ನಿಗಾ ವಹಿಸಬೇಕು. ದೆಹಲಿ ಸೇರಿದಂತೆ ರಾಜ್ಯದ ವಿವಿಧ ಭಾಗ, ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ದಿನಕ್ಕೆರಡು ಬಾರಿ ಕೈಗೊಳ್ಳಬೇಕು. ಮಾಹಿತಿ ನೀಡದೇ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಹೊರ ರಾಜ್ಯ ಹಾಗೂ ವಿದೇಶದಿಂದ ಬಂದವರ ಮಾಹಿತಿ ಕಲೆಹಾಕಬೇಕು ಎಂದರು.
ಜಿಲ್ಲಾಸ್ಪತ್ರೆ ಹಾಗೂ ತಾಲೂಕಾಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿರುವ ವಿಶೇಷ ವಾರ್ಡ್ ಗಳಿಗೆ ಕೇಂದ್ರೀಕೃತ ವೆಂಟಿಲೇಷನ್ ವ್ಯವಸ್ಥೆ
ಕೈಗೊಳ್ಳಬೇಕು. ಕನಿಷ್ಠ ಹತ್ತು ಹಾಸಿಗೆಗಳಿಗೆ ಏಕ ವ್ಯವಸ್ಥೆಯಲ್ಲಿ ಆ್ಯಕ್ಸಿಜನ್ ಪೂರೈಕೆಯಾಗಬೇಕು. ಇದಕ್ಕೆ ಬೇಕಾದ ವೆಚ್ಚ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಎಸ್‌ಡಿಆರ್‌ಎಫ್ ಅನುದಾನ ಬಳಕೆ ಮಾಡಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕೃಷಿ ಬಿತ್ತನೆಗೆ ಅಗತ್ಯವಾದ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ವಿತರಣೆಯಲ್ಲಿ ಯಾವುದೇ ಗೊಂದಲವಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲಾ ಧಿಕಾರಿ ಕೃಷ್ಣ ಭಾಜಪೇಯಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಗೃಹ ಸಚಿವರಿಗೆ ಮಾಹಿತಿ ನೀಡಿದರು