ಹಾವೇರಿ: ಹೊಲಿಕೆಯಾಗದ ರೀತಿಯಲ್ಲಿದ್ದ ದಿವಂಗತ ಜೆ.ಎಚ್. ಪಟೇಲರ ಪುತ್ಥಳಿಯನ್ನು ನಗರದ ಜೆ.ಎಚ್. ಪಟೇಲ್ ವೃತ್ತದಿಂದ ತೆರವುಗೊಳಿಸಿ ಎರಡು ವರ್ಷ ಕಳೆದರೂ ಹೊಸ ಪುತ್ಥಳಿ ಪುನರ್ ಪ್ರತಿಷ್ಠಾಪನೆ ಮಾಡದೆ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.
ಹಾವೇರಿ ಹೊಸ ಜಿಲ್ಲೆಯಾಗಿ ರೂಪಿಸಲು ಕಾರಣಿಭೂತರಾದ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರಿಗೆ ಗೌರವ ಸಲ್ಲಿಸುವುದಕ್ಕಾಗಿ ನಗರದ ಜೆ.ಎಚ್. ಪಟೇಲ್ ವೃತ್ತದಲ್ಲಿ 2016ರ ಜುಲೈ ತಿಂಗಳಲ್ಲಿ ಜೆ.ಎಚ್. ಪಟೇಲರ ಪುತ್ಥಳಿ ಅನಾವರಣಗೊಳಿಸಲಾಗಿತ್ತು. ಈ ಪುತ್ಥಳಿ ಅನಾವರಣಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಪುತ್ಥಳಿ ನೋಡಿ, ‘ಇದು ಜೆ.ಎಚ್. ಪಟೇಲರನ್ನು ಹೋಲುತ್ತಿಲ್ಲ. ಇದನ್ನು ಮೊದಲು ಬದಲಾಯಿಸಿ’ ಎಂದು ಸೂಚಿಸಿದ್ದರು. ಆದರೆ, ಅವರ ಆದೇಶದಂತೆ ಪುತ್ಥಳಿ ಬದಲಾವಣೆ ಕಾರ್ಯ ಈ ವರೆಗೂ ನಡೆದಿಲ್ಲ.
ಪುತ್ಥಳಿ ನಿರ್ಮಾಣದ ಗುತ್ತಿಗೆ ಪಡೆದವರು ಹೊಸ ಪುತ್ಥಳಿ ತಯಾರಿಸಿ ಪ್ರತಿಷ್ಠಾಪಿಸಬೇಕಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿಯೇ ಜೆ.ಎಚ್. ಪಟೇಲರ ಪುತ್ಥಳಿ ಇನ್ನೂ ಪುನರ್ ಪ್ರತಿಷ್ಠಾಪನೆ ಆಗಿಲ್ಲ. ಇನ್ನು ಯಾರೂ ಗುತ್ತಿಗೆದಾರರ ಮೇಲೆ ಈ ಕುರಿತು ಒತ್ತಡವೂ ಹೇರಿಲ್ಲ. ಹೀಗಾಗಿ ಪುತ್ಥಳಿ ಪುನರ್ ಪ್ರತಿಷ್ಠಾಪನೆ ಇನ್ನೂ ಮರೀಚಿಕೆಯಾಗಿದೆ.
ಜಿಲ್ಲೆ ಸ್ಥಾಪನೆಗೆ ಕಾರಣರಾಗಿದ್ದ ಮಾಜಿ ಮುಖ್ಯಮಂತ್ರಿ ದಿ| ಜೆ.ಎಚ್. ಪಟೇಲರ ಪುತ್ಥಳಿಯನ್ನು ಹೋಲಿಕೆಯಾಗದ ರೀತಿಯಲ್ಲಿ ನಿರ್ಮಿಸಿದ್ದೇ ಮೊದಲ ತಪ್ಪು. ಒಮ್ಮೆ ತಪ್ಪಾದ ಬಳಿಕ ಅದನ್ನು ತಕ್ಷಣ ಸರಿಪಡಿಸಿ ಪುನಃ ಪ್ರತಿಷ್ಠಾಪಿಸದೆ ಇರುವುದು ಜೆ.ಎಚ್. ಪಟೇಲರಿಗೆ ಮಾಡಿದ ಅವಮಾನ. ಈಗಲಾದರೂ ಜನಪ್ರತಿನಿಧಿ ಗಳು ಜೆ.ಎಚ್. ಪಟೇಲರ ಹೊಸ ಪುತ್ಥಳಿ ಸ್ಥಾಪನೆಗೆ ಮುಂದಾಗಬೇಕು.
·ಮಂಜುನಾಥ ಮಠದ, ನಾಗರಿಕ