Advertisement

ಹಾವೇರಿ: ಹೊಸ ಯೋಜನೆ ಕೊಟ್ಟಿಲ್ಲ ರಾಜ್ಯ ಸರ್ಕಾರ-ಬಿ.ವೈ. ವಿಜಯೇಂದ್ರ

04:02 PM Feb 02, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ಬಡವರು ಬಡವರಾಗಿಯೇ ಇರಲು ಕಾಂಗ್ರೆಸ್‌ ಕಾರಣ. ಎಲ್ಲಿ ಬಡತನ ಇರುತ್ತದೆಯೋ ಅಲ್ಲಿ ಕಾಂಗ್ರೆಸ್‌ ಅಧಿ ಕಾರಕ್ಕೆ
ಬರಲು ಸಾಧ್ಯ ಅಂತ ಕಾಂಗ್ರೆಸ್ಸಿನವರು ಬಲವಾಗಿ ನಂಬಿದ್ದಾರೆ. ರಾಜ್ಯದಲ್ಲಿ ಅವರದೇ ಸರ್ಕಾರವಿದ್ದರೂ ಕಾಂಗ್ರೆಸ್‌ ಶಾಸಕರಿಂದ
ಅವರ ಕ್ಷೇತ್ರಗಳಿಗೆ ಅನುದಾನ ತಂದ ಒಂದು ಉದಾಹರಣೆ ಇದ್ದರೆ ತೋರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು.

Advertisement

ನಗರದಲ್ಲಿ ಗುರುವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಎಂಟು ತಿಂಗಳಾಗಿದ್ದರೂ ಒಂದೇ ಒಂದು ಹೊಸ ಯೋಜನೆ ಕೊಟ್ಟಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲದಿದ್ದರೆ ಗ್ಯಾರಂಟಿ ಬಂದ್‌ ಮಾಡುತ್ತೇವೆ ಎಂದು ಮಾಗಡಿ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ
ಹೇಳಿದ್ದಾರೆ. ಆ ದುಸ್ಸಾಹಸಕ್ಕೆ ಕೈ ಹಾಕಿದರೆ ನಿಮ್ಮ ಕಿವಿ ಹಿಂಡಬೇಕಾಗುತ್ತದೆ. ಸಿಎಂ ತಮ್ಮ ಮನಸ್ಸಿನ ಮಾತನ್ನು ಮಾಗಡಿ ಶಾಸಕರ ಬಾಯಿಂದ ಹೇಳಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ನಮಗೆ ಅನಿರೀಕ್ಷಿತ ಸೋಲಾಯಿತು. ಏಳೆಂಟು ತಿಂಗಳಿಂದ ಕಾರ್ಯಕರ್ತರ ಉತ್ಸಾಹ ಕುಗ್ಗಿತ್ತು. ಆದರೆ ಪಂಚ ರಾಜ್ಯಗಳ ಫಲಿತಾಂಶ ಇಡೀ ದೇಶದಲ್ಲಿ ಬಿಜೆಪಿ ಅಲೆ ಇರೋದನ್ನು ಸಾಬೀತುಪಡಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಶ್ರೇಷ್ಠ. ಕಾಂಗ್ರೆಸ್‌ನವರು ಒಂದು ಸುಳ್ಳು ನೂರು ಬಾರಿ ಹೇಳಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲೂ ಗ್ಯಾರಂಟಿ ಕೊಟ್ಟು ಮೋಸ ಮಾಡಲು ಹೋಗಿದ್ದರು. ಆದರೆ ಪ್ರಜ್ಞಾವಂತ ಮತದಾರರು ದೇಶದ ಹಿತರಕ್ಷಣೆ ದೃಷ್ಟಿಯಿಂದ ಮೋದಿಯವರೇ ಗ್ಯಾರಂಟಿ ಅಂತ ತೀರ್ಪು ಕೊಟ್ಟರು ಎಂದು ಹೇಳಿದರು.

ಮಹಿಳೆಯರಿಗೆ ಉಚಿತ ಬಸ್‌ ಅಂತ ಹೇಳುತ್ತಾರೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್‌ಗಳೇ ಸಿಗುತ್ತಿಲ್ಲ. ಶೇ.50ರಷ್ಟು ಬಸ್‌ ರೂಟ್‌ ಕಟ್‌ ಮಾಡಿದ್ದಾರೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರೈತರ ಬೆಳೆ ಉಳಿಸಲು ಏಳು ತಾಸು ಕರೆಂಟ್‌ ಕೊಡುತ್ತಿಲ್ಲ.ರೈತರ ಬೆಳೆ ಸಂಪೂರ್ಣ ನಾಶವಾಗಿದೆ.

Advertisement

ಯಡಿಯೂರಪ್ಪನವರು “ಕಿಸಾನ್‌ ಸಮ್ಮಾನ್‌’ ಯೋಜನೆಯಡಿ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂ. ಕೊಡುವುದನ್ನೂ ಬಂದ್‌ ಮಾಡಿದ್ದಾರೆ. ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕನಿಕರ ಬರುತ್ತಿಲ್ಲ. ಆದರೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಶಾಸಕ ಅರವಿಂದ ಬೆಲ್ಲದ, ರಾಜ್ಯ ಉಪಾಧ್ಯಕ್ಷ ಡಾ|ಬಸವರಾಜ ಕೇಲಗಾರ, ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಪಿ.ರಾಜೀವ, ಕಳಕಪ್ಪ ಬಂಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಪಾಲಾಕ್ಷಗೌಡ ಪಾಟೀಲ, ಶೋಭಾ ನಿಸ್ಸೀಮಗೌಡ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next