ಹಾವೇರಿ: ಹೆಣ್ಣು-ಗಂಡು ಎಂಬ ಭೇದಬೇಡ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಹಯೋಗದಲ್ಲಿ “ಮಗಳನ್ನು
ಉಳಿಸಿ ಮಗಳನ್ನು ಓದಿಸಿ’ ಯೋಜನೆ ಅಂಗವಾಗಿ ಶುಕ್ರವಾರ ಆಯೋಜಿಸಲಾದ ಹೆಣ್ಣು ಮಕ್ಕಳ ಹುಟ್ಟುಹಬ್ಬದ ಆಚರಣೆ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕುರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಲಾಖೆಯಿಂದ ಬೀದಿ ನಾಟಕ, ಜಾಗೃತಿ ಜಾಥಾಗಳು, ಭಿತ್ತಿ ಪತ್ರಗಳ ಮೂಲಕ ಹೆಣ್ಣು ಮಗುವಿನ ರಕ್ಷಣೆ ಕುರಿತಾಗಿ ಅರಿವು ಮೂಡಿಸಲಾಗುತ್ತಿದೆ ಹೇಳಿದರು.
ಇದೇ ಸಂದರ್ಭದಲ್ಲಿ ಜನವರಿ ಮಾಹೆಯಲ್ಲಿ ಜನಿಸಿದ ಅಂಗನವಾಡಿ ಹೆಣ್ಣು ಮಕ್ಕಳೊಂದಿಗೆ ಕೇಕ್ ಕತ್ತರಿಸಿದರು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಅಡಿಯಲ್ಲಿ 5 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ಮತ್ತು 5 ಫಲಾನುಭವಿಗಳಿಗೆ ಭಾಗ್ಯ ಲಕ್ಷ್ಮಿ ಬಾಂಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಇದನ್ನೂ ಓದಿ:ಬರ್ತ್‌ಡೇ ಬದಲು ಪುಣ್ಯದ ಕೆಲಸದಲ್ಲಿ ಕೈ ಜೋಡಿಸಿ: ದುನಿಯಾ ವಿಜಯ್ ಮನವಿ
ತಾಪಂ ಸದಸ್ಯ ವಿರೂಪಾಕ್ಷಪ್ಪ ಹುಲ್ಲೂರು, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಭೋಜರಾಜ ಕೆರೂಡಿ, ಕೆ.ಸಿ. ಕೋರಿ, ತಾಪಂ ಇಒ ಬಸರಾಜ ಡಿ.ಸಿ., ಬಿಇಒ ಎಂ.ಎಚ್. ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾರ್ಜುನ ಕೆಂಪಳ್ಳೆರ,
ಮೇಲ್ವಿಚಾರಕಿಯರು ಇತರರು ಇದ್ದರು.