ಹಿರೇಕೆರೂರ: ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ 25 ಕೋಟಿ ರೂ. ಅನುದಾನ ನೀಡಲು ಸಮ್ಮತಿಸಿದ ಹಿನ್ನೆಲೆಯಲ್ಲಿ, ಬುಧವಾರ ತಾಲೂಕಿನ ಸರ್ವಜ್ಞನ ಜನ್ಮಸ್ಥಳ ಅಬಲೂರು ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು, ಗ್ರಾಮದ ಸಮಗ್ರ ಅಭಿವೃದ್ಧಿ ಕುರಿತು ಗ್ರಾಮಸ್ಥರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂಬುದರ ಕುರಿತು ಗ್ರಾಮಸ್ಥರೊಂದಿಗೆ ಸಚಿವ ಬಿ.ಸಿ. ಪಾಟೀಲ ಸಮಾಲೋಚನೆ ನಡೆಸಿದರು.
ಅಬಲೂರಿನಲ್ಲಿ ಸರ್ವಜ್ಞನ ತಂದೆ-ತಾಯಿಯರ ಹೆಸರಿನಲ್ಲಿ ಕುಟೀರ ನಿರ್ಮಾಣ, ಸೋಮೇಶ್ವರ ದೇವಸ್ಥಾನದ ದ್ವಾರ ಬಾಗಿಲಿನಲ್ಲಿ ಸುಂದರ ಗೋಪುರ, ಗ್ರಾಮದಲ್ಲಿರುವ ಸಣ್ಣ ಕೆರೆಯನ್ನು ಪುಷ್ಕರಣಿಯಾಗಿ ಮಾರ್ಪಡಿಸುವುದು, ಗ್ರಾಮದಲ್ಲಿ ರಸ್ತೆ ಅಗಲೀಕರಣಗೊಳಿಸಿ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಾಣ, ರಸ್ತೆಯ ಅಕ್ಕಪಕ್ಕದಲ್ಲಿ ವಿದ್ಯುದ್ದೀಕರಣ, ಹೈಮಾಸ್ಟ್ ಬೀದಿದೀಪ, ಆಂಜನೇಯ ದೇವಸ್ಥಾನದ ಬಳಿಯ ಜಾಗೆಯಲ್ಲಿ ಕಾರಂಜಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಅಲ್ಲದೇ, ಆಕರ್ಷಕ ಕಟ್ಟಡ ನಿರ್ಮಾಣ ಮಾಡುವ ದೃಷ್ಟಿಯಿಂದ ತಜ್ಞರನ್ನು ಕರೆಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಜ್ಞ ಪ್ರಾಧಿಕಾರಕ್ಕೆ 25 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಪ್ರಾಧಿಕಾರದ ಮೂಲಕ ಅಬಲೂರು, ಮಾಸೂರು ಹಾಗೂ ಹಿರೇಕೆ ರೂರನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ವೇಳೆ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವಾನಂದ ಉಳ್ಳೇಗಡ್ಡಿ, ತಹಶೀಲ್ದಾರ್ ರಾದ ಎಂ.ಆರ್.ಕುಲಕರ್ಣಿ, ಅರುಣಕುಮಾರ ಕಾರಗಿ, ಗ್ರಾಪಂ ಅಧ್ಯಕ್ಷೆ ಉಮಾ ಚಕ್ರಸಾಲಿ, ಉಪಾಧ್ಯಕ್ಷ ಉಜ್ಜನಗೌಡ ಮಳವಳ್ಳಿ, ಸದಸ್ಯರಾದ ಗೀತಾ ಇಂಗಳಗೊಂದಿ, ಜಗದೀಶ ದಂಡಗಿಹಳ್ಳಿ, ಹನುಮಂತಪ್ಪ ಹರಿಜನ, ಯಲ್ಲಮ್ಮ ಆಡೂರ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶಂಕ್ರಪ್ಪ ಗೌಡರ, ನಾಗರಾಜ ಕುರುವತ್ತೇರ, ಗ್ರಾಮದ ಹಿರಿಯರಾದ ಬಸವರಾಜಪ್ಪ ಮಳವಳ್ಳಿ, ಮಹಾಲಿಂಗಪ್ಪ ಗುಳಕಾಯಿ, ರುದ್ರಮುನಿಸ್ವಾಮಿ ಆರಾಧ್ಯಮಠ, ಸುರೇಶಪ್ಪ ಕುರುವತ್ತೇರ, ಉಜ್ಜಪ್ಪ ಮುದಗೋಳ, ಪಾಲಾಕ್ಷಪ್ಪ ಗುಳಕಾಯಿ, ಜಗದೀಶ ಮಳವಳ್ಳಿ, ಅಶೋಕ ಆಡೂರ, ರವಿಶಂಕರ ಬಾಳಿಕಾಯಿ, ಬಸವರಾಜ ಕಾಲ್ವಿಹಳ್ಳಿ ಇತರರಿದ್ದರು.