ಹಾವೇರಿ: ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ, ಈ ಯೋಜನೆಗಳ ಅದರ ಸಾಧಕ ಬಾಧಕ ಕುರಿತಂತೆ ಮಾ. 4ರಿಂದ 12ರ ವರೆಗೆ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತಿಗಳಿಗೆ ನ್ಯಾಷನಲ್ ಲೆವೆಲ್ ಮಾನೀಟರ್ ತಂಡ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ.
ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸಿರುವ ಮಾನಿಟರಿಂಗ್ ತಂಡದ ಲಕ್ಷ್ಮೀದೇವಿ ಹಾಗೂ ಡಾ| ಅಖೀಲಾಂಡೇಶ್ವರಿ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಅನುಷ್ಠಾನಾಧಿಕಾರಿಗಳೊಂದಿಗೆ ಚರ್ಚಿಸಿದರು.
ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲಿದ್ದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಸದಸ್ಯರ ಸಭೆ ನಡೆಸಿ ಚರ್ಚಿಸಲಿದ್ದೇವೆ. ಕೇಂದ್ರ ಯೋಜನೆಗಳ ಆಯ್ದ ಫಲಾನುಭವಿಗಳೊಂದಿಗೆ ಚರ್ಚಿಸಲಿದ್ದೇವೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಅನುಷ್ಠಾನಾಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ಕೇಂದ್ರ ತಂಡದ ಲಕ್ಷ್ಮೀದೇವಿ ಸೂಚನೆ ನೀಡಿದರು.
ಮನರೇಗಾ ಯೋಜನೆ ಪಂಚಾಯತ್ ರಾಜ್ ವ್ಯವಸ್ಥೆಯ ಕಾರ್ಯನಿರ್ವಹಣೆ, ಸಾಮಾಜಿಕ ಭದ್ರತೆ ಯೋಜನೆಗಳ ಅನುಷ್ಠಾನ, ಆದರ್ಶ ಗ್ರಾಮ ಯೋಜನೆ, ಎನ್‌ಆರ್‌ಎಲ್ ಎಂ ಯೋಜನೆ, ಪಿಎಂಜಿಎಸ್‌ವೈ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸಮಗ್ರ ಜಲಾನಯನ ನಿರ್ವಹಣಾ ಯೋಜನೆ, ಡಿಡಿಯು ಜಿಕೆವೈ ಯೋಜನೆ, ಡಿಐಎಲ್ ಆರ್‌ಎಂಪಿ ಯೋಜನೆಗಳು ಒಳಗೊಂಡಂತೆ ಸ್ವ ಸಹಾಯ ಸಂಘಗಳ ಚಟುವಟಿಕೆಗಳು, ತರಬೇತಿ, ಮಾನವ ಸಂಪನ್ಮೂಲಗಳ ನಿರ್ವಹಣೆ, ಪಂಚಾಯತ್‌ಗಳ ಕಾರ್ಯನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಲಿದೆ. ಜಿಲ್ಲೆಯಲ್ಲಿ ಅಂತರ್ಜಲ ನಿರ್ವಹಣೆ, ಉದ್ಯೋಗ ಖಾತ್ರಿಯಲ್ಲಿ ಮಾದರಿ ಕಾರ್ಯಗಳು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಗುರುತರ ಸಾಧನೆ ಕುರಿತಂತೆ ಮಾಹಿತಿ ಪಡೆದ ತಂಡ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.
ಜಿಲ್ಲೆಯ ಹಾವೇರಿ ತಾಲೂಕಿನ ಕರ್ಜಗಿ, ಕುರುಬಗೊಂಡ, ನೆಗಳೂರು, ಹಿರೇಕೆರೂರು ತಾಲೂಕಿನ ಚನ್ನಳ್ಳಿ, ಅರಳಿಕಟ್ಟೆ, ಹುಲ್ಲತ್ತಿ, ಚಿನ್ನಮುಳಗುಂದ ಹಾಗೂ ಶಿಗಾವಿ ತಾಲೂಕಿನ ನಾರಾಯಣಪುರ, ಬಾಡ, ಕೊಣನಕೇರಿ ಭೇಟಿ ನೀಡಲು ಪ್ರವಾಸ ನಿಗದಿಪಡಿಸಲಾಯಿತು. ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜಾಫರ್ ಶರಿಫ್, ಸಾಮಾಜಿಕ ಭದ್ರತಾ ಯೋಜನೆಯ ತಹಶೀಲ್ದಾರ್ ಪ್ರಶಾಂತ ನಾಲವಾರ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿಗಳು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಾಹಿತಿ ಒದಗಿಸಿದರು.