Advertisement

ಇನ್ನೂ ಎರಡು ಸಚಿವ ಸ್ಥಾನ ನಿರೀಕ್ಷೆ

03:13 PM Dec 11, 2019 | Naveen |

ಎಚ್‌.ಕೆ. ನಟರಾಜ
ಹಾವೇರಿ: ಉಪಚುನಾವಣೆ ಭರಾಟೆ ಮುಗಿಯುತ್ತಿದ್ದಂತೆ ಈಗ ಸಚಿವ ಸ್ಥಾನದ ವಿಚಾರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು. ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಗುತ್ತವೆ ಹಾಗೂ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗುತ್ತದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳುತ್ತಲೇ ಬಂದಿದ್ದು. ಆ ಪ್ರಕಾರ ಹಿರೇಕೆರೂರು ಕ್ಷೇತ್ರದ ಬಿ.ಸಿ. ಪಾಟೀಲ ಅವರಿಗೆ ಒಂದು ಸಚಿವ ಸ್ಥಾನ ಖಚಿತವಾಗಿದೆ. ಆದರೆ, ಯಾವ ಖಾತೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಇನ್ನು ಅನರ್ಹ ಶಾಸಕ ಆರ್‌. ಶಂಕರ್‌ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ ಯಡಿಯೂರಪ್ಪ, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆ ಪ್ರಕಾರ ಅವರಿಗೂ ಸಚಿವ ಸ್ಥಾನ ನೀಡಿದರೆ ಈಗಾಗಲೇ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಸೇರಿ ಜಿಲ್ಲೆಗೆ ಒಟ್ಟು ಮೂರು ಸಚಿವ ಸ್ಥಾನ ಸಿಕ್ಕಂತಾಗುತ್ತದೆ. ಕಾಂಗ್ರೆಸ್‌ನಲ್ಲಿದ್ದಾಗ ಎಷ್ಟೇ ಹೋರಾಟ ನಡೆಸಿದರೂ ಬಿ.ಸಿ. ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಬಿಜೆಪಿಗೆ ಬಂದ ಮೇಲೆ ಬಿ.ಸಿ. ಪಾಟೀಲರಿಗೆ ಮಂತ್ರಿ ಸ್ಥಾನದ ಅದೃಷ್ಟ ಒಲಿದು ಬಂದಿದೆ. ತನ್ಮೂಲಕ ನಾಲ್ಕೈದು ದಶಕಗಳ ಬಳಿಕ ಹಿರೇಕೆರೂರು ಕ್ಷೇತ್ರದ ಶಾಸಕರೋರ್ವರು ಸಚಿವರಾಗುತ್ತಿದ್ದಾರೆ ಎಂಬ ಖುಷಿ ಕ್ಷೇತ್ರದಲ್ಲಿ ಮನೆಮಾಡಿದೆ.

ಪ್ರಬಲ ಖಾತೆ ಮೇಲೆ ಕಣ್ಣು: ಬಿ.ಸಿ. ಪಾಟೀಲ ಸಣ್ಣಪುಟ್ಟ ಖಾತೆಯನ್ನು ಸ್ವೀಕರಿಸುವ ಮನೋಭಾವದವರೇ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ಅವರಿಗೆ ಪ್ರಬಲ ಖಾತೆಯನ್ನೇ ಮುಖ್ಯಮಂತ್ರಿ ಯಡಿಯೂರಪ್ಪ ನೀಡುತ್ತಾರೆ. ಆದರೆ, ಅವರಿಗಾಗಿ ಯಾವ ಖಾತೆ ತೆಗೆದಿಸಿದ್ದಾರೆ ಎಂಬುದು ಜಿಲ್ಲೆಯ ಜನರಲ್ಲಿ ಕುತೂಹಲ ಕೆರಳಿಸಿದೆ.

ಬಿ.ಸಿ. ಪಾಟೀಲ ರಾಜಕಾರಣಕ್ಕೆ ಬರುವ ಮೊದಲು ಪೊಲೀಸ್‌ ಇಲಾಖೆಯಲ್ಲಿ ಇದ್ದವರು. ಅವರಿಗೆ ಗೃಹ ಸಚಿವರಾಗುವ ಬಯಕೆ ಮೊದಲಿನಿಂದಲೂ ಇದೆ. ಅವರ ಬೇಡಿಕೆಯಂತೆ ಅವರಿಗೆ ಗೃಹ ಖಾತೆಯೇ ಸಿಗಲಿದೆ ಎಂಬುದು ಅವರ ಕೆಲ ಆಪ್ತರ ಅಭಿಪ್ರಾಯ. ಆದರೆ, ಗೃಹ ಖಾತೆಯನ್ನು ಈಗಾಗಲೇ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದರಿಂದ ಆರಂಭದಲ್ಲಿಯೇ ಒಬ್ಬರಿಗೆ ನೀಡಿರುವ ಖಾತೆಯನ್ನು ವಾಪಸ್‌ ಪಡೆಯುವ ಬದಲಿಗೆ ಬಿ.ಸಿ. ಪಾಟೀಲರಿಗೆ ಲೋಕೋಪಯೋಗಿ, ನೀರಾವರಿ, ಇಂಧನದಂಥ ಪ್ರಮುಖ ಖಾತೆ ನೀಡಬಹುದು ಎನ್ನಲಾಗಿದೆ.

Advertisement

ಇದರಿಂದ ಬೊಮ್ಮಾಯಿ ಹಾಗೂ ಬಿ.ಸಿ. ಪಾಟೀಲರ ಮೂಲಕ ಜಿಲ್ಲೆಗೆ ಎರಡು ಪ್ರಬಲ ಖಾತೆ ಸಚಿವ ಸ್ಥಾನ ಸಿಕ್ಕಂತಾಗುತ್ತದೆ. ಸಚಿವ ಸ್ಥಾನದ ವಿಚಾರವಾಗಿ ಬಿ.ಸಿ. ಪಾಟೀಲರು ಕ್ಯಾತೆ ತೆಗೆಯದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಳೆದು ತೂಗಿ ಸೂಕ್ತ, ಪ್ರಬಲ ಖಾತೆ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಉಸ್ತುವಾರಿ ಯಾರಿಗೆ? ಜಿಲ್ಲಾ ಉಸ್ತುವಾರಿ ಸ್ಥಾನಕ್ಕಾಗಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಸಿ. ಪಾಟೀಲ ನಡುವೆ ಪೈಪೋಟಿ ನಡೆಯಬಹುದೇ ಎಂಬ ಚರ್ಚೆಯೂ ವ್ಯಾಪಕವಾಗಿ ನಡೆದಿದೆ. ಈಗಾಗಲೇ ಜಿಲ್ಲೆಯ ಉಸ್ತುವಾರಿಯನ್ನು ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ. ಮುಂದೆ ಸಚಿವ ಸ್ಥಾನ ಪಡೆಯುವ ಬಿ.ಸಿ. ಪಾಟೀಲರಿಗೂ ತವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವ ಬಯಕೆ ಇದೆ. ಹೀಗಾಗಿ ಇಲ್ಲಿ ಯಾರು ಯಾರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ತ್ಯಾಗ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next