ಹಾವೇರಿ: ಸಮಾಜದ ಕೊಳೆ ತೊಳೆಯಬೇಕು. ಒಳ್ಳೆಯ ಸಮಾಜ ಕಟ್ಟಬೇಕು ಎಂದು ಆಶಿಸುವ ಪ್ರತಿಯೊಬ್ಬರಲ್ಲೂ ಮಾಚಿದೇವ ಇದ್ದಾನೆ. ಮಾಚಿದೇವರ ಚಿಂತನೆಗಳ ಪ್ರೇರಣೆಯಿಂದ ಸಮಾಜ ಮೂಢನಂಬಿಕೆಯಿಂದ ದೂರವಾಗಿ ಜಾಗ್ರತಗೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಡಿ. ದೇವರಾಜ ಅರಸು ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಹಾಗೂ ತಾಲೂಕು ಮಡಿವಾಳ ಸಮುದಾಯ ಆಶ್ರಯದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಶ್ರೀ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ಹಾಗೂ ಶ್ರಮಜೀವಿ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು. ಸಮಾಜದ ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರವನ್ನು ಹೋಗಲಾಡಿಸಲು ಹೋರಾಡಿದರು ಎಂದರು.
ಮಡಿವಾಳ ಸಮಾಜವು ಹಿಂದೂಳಿದ ಸಮಾಜವಾಗಿದ್ದು, ಈ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಮಾಚಿದೇವರ ಸಭಾಭವನಕ್ಕೆ ಸೂಕ್ತ ಜಾಗ ಗುರುತಿಸಿ ಕೊಡಿಸುವ ಕೆಲಸ ಮಾಡಲಾಗುವುದು. ನಗರದ ಒಂದು ವೃತ್ತಕ್ಕೆ ಮಡಿವಾಳ ಮಾಚಿದೇವರ ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಉಪನ್ಯಾಸಕ ಕಾಂತೇಶ ಸಿದ್ದಣ್ಣನವರ ಉಪನ್ಯಾಸ ನೀಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಉಂಡಿ, ಸಮಾಜದ ತಾಲೂಕು ಅಧ್ಯಕ್ಷ ರವೀಂದ್ರ ಮಡಿವಾಳರ, ಕಾರ್ಯದರ್ಶಿ ನಾಗರಾಜ ಮಡಿವಾಳರ, ರಾಜ್ಯ ಸದಸ್ಯ ದೇವರಾಜ ಮಡಿವಾಳರ, ಜಿಲ್ಲಾ ಕಾರ್ಯದರ್ಶಿ ಸುರೇಶ ಮಡಿವಾಳರ, ಶಹರ ಅಧ್ಯಕ್ಷ ಈರಣ್ಣ ಮಡಿವಾಳ, ಎಸ್.ಕೆ. ನಾಗರಾಜ, ಭಾಗ್ಯ ಮಡಿವಾಳ, ಹನುಮಂತಪ್ಪ ಮಡಿವಾಳರ, ವಿಜಯಲಕ್ಷ್ಮೀ ಮಡಿವಾಳರ, ಮಂಜುಳಾ ಮಡಿವಾಳರ, ನಾಗಪ್ಪ ಮಡಿವಾಳರ ಇನ್ನಿತರರು ಇದ್ದರು.