Advertisement
ಈಗಾಗಲೇ ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯವಾಗಿರಲಿಲ್ಲ. ಸದ್ಯ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವುದರಿಂದ ಮೇ ತಿಂಗಳಲ್ಲಿ ಸಮ್ಮೇಳನ ನಡೆಸಲು ಕಳೆದ ಮಾರ್ಚ್ ತಿಂಗಳಲ್ಲಿ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮೇ 20, 21 ಮತ್ತು 22ರಂದು ಸಮ್ಮೇಳನ ನಡೆಸುವ ಬಗ್ಗೆ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿತ್ತು.
Related Articles
Advertisement
ಈ ಸಲ ಸಮ್ಮೇಳನ ನಡೆಸಲು ಅನುದಾನಕ್ಕೆ ಕಾಯುವ ಪ್ರಮೇಯವಿಲ್ಲ. ಬಜೆಟ್‌ನಲ್ಲೇ 20 ಕೋಟಿ ರೂ. ಘೋಷಣೆ ಮಾಡಲಾಗಿದೆ. ಆದರೆ ವೇದಿಕೆ ನಿರ್ಮಾಣ ಸೇರಿದಂತೆ ಅಗತ್ಯ ಸಿದ್ಧತೆಗೆ ಸಮಯಾವಕಾಶ ಬೇಕಾಗಲಿದೆ. ಈ ಸಲ ಸಮಾನಾಂತರ ವೇದಿಕೆಗಳನ್ನು ಮಾಡದೇ ಮುಖ್ಯ ವೇದಿಕೆಯಲ್ಲೇ ಎಲ್ಲ ಕಾರ್ಯಕ್ರಮ, ಗೋಷ್ಠಿ ನಡೆಸುವ ಬಗ್ಗೆ ಆಸಕ್ತಿ ತೋರಲಾಗಿದೆ. ಡಿಜಿಟಲ್ ಟಚ್ ಕೊಡುವ ಬಗ್ಗೆಯೂ ಕಸಾಪ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಮೇ ತಿಂಗಳಲ್ಲಿ ನಡೆದರೆ ಬಿಸಿಲು, ಸೆಕೆ ಪ್ರಮಾಣ ಹೆಚ್ಚಿರುವುದರಿಂದ ಎಸಿ ಅಳವಡಿಸುವ ಬಗ್ಗೆಯೂ ಮಾತನಾಡಿದ್ದರು. ಇವೆಲ್ಲ ತಯಾರಿ ಆಗಬೇಕೆಂದರೆ ಹೆಚ್ಚಿನ ಸಮಯ ಬೇಕಾಗಲಿದೆ.
ಸ್ಪಷ್ಟ ನಿರ್ಧಾರ ಘೋಷಿಸಲಿ: ಸಮ್ಮೇಳನ ನಡೆಯುವ ದಿನಾಂಕಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಲಕ್ಷಾಂತರ ಜನ ಸೇರುವ ಸಾಹಿತ್ಯ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ಮಾಡದಿದ್ದರೆ ಹಾವೇರಿ ಜಿಲ್ಲೆಗೆ ಮತ್ತೂಮ್ಮೆ ಕೆಟ್ಟ ಹೆಸರು ತಪ್ಪಿದ್ದಲ್ಲ. ಸಮ್ಮೇಳನದ ಆಮಂತ್ರಣ ಪತ್ರಿಕೆ, ಸ್ಮರಣ ಸಂಚಿಕೆ, ವೇದಿಕೆ ನಿರ್ಮಾಣ, ಅತಿಥಿಗಳಿಗೆ ಊಟ ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಸಿದ್ಧತೆ ನಡೆಸಬೇಕಿದೆ. ಸಮ್ಮೇಳನವನ್ನು ಈಗ ನಿಗದಿಪಡಿಸಿದ ತಾತ್ಕಾಲಿಕ ದಿನಾಂಕದಲ್ಲೇ ನಡೆಸುವುದಾದರೆ ಅಥವಾ ಮುಂದೂಡುವ ಬಗ್ಗೆಯಾದರೂ ಸರ್ಕಾರ ಸ್ಪಷ್ಟ ನಿರ್ಧಾರ ಘೋಷಿಸಬೇಕು. ಆ ಮೂಲಕ ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆಯಬೇಕಿದೆ.
ತರಾತುರಿಯಲ್ಲಿ ಸಮ್ಮೇಳನ ಬೇಡ: ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಅವಾಂತರ ಶುರುವಾಗಿದೆ. ಸಮ್ಮೇಳನ ನಡೆಯುವ ಸ್ಥಳ ಕಪ್ಪು ಮಣ್ಣಿನಿಂದ ಕೂಡಿರುವುದರಿಂದ ಒಮ್ಮೆ ಮಳೆಯಾದರೆ ಹಲವು ದಿನ ತೇವಾಂಶ ಇರುತ್ತದೆ. ವೇದಿಕೆ ಇತ್ಯಾದಿ ತಯಾರಿ ಆದ ಮೇಲೆ ಗಾಳಿ, ಮಳೆಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಸಮ್ಮೇಳನ ಆಯೋಜನೆಗೆ ತಾತ್ಕಾಲಿಕ ನಿಗದಿ ಮಾಡಿರುವ ದಿನಾಂಕಕ್ಕೆ ಕೇವಲ ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಇಷ್ಟು ಕಡಿಮೆ ಅವ ಧಿಯಲ್ಲಿ ಸಮ್ಮೇಳನ ನಡೆಸುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ತರಾತುರಿಯಲ್ಲಿ ಸಮ್ಮೇಳನ ನಡೆಸುವುದಕ್ಕಿಂತ ಮಳೆಗಾಲ ಬಳಿಕ ನವೆಂಬರ್, ಡಿಸೆಂಬರ್ ವೇಳೆಗೆ ನಡೆಸುವುದೇ ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿವೆ. ಆದ್ದರಿಂದ ಸರ್ಕಾರ ಹಾಗೂ ಕಸಾಪ ಪದಾಧಿಕಾರಿಗಳು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಸಮ್ಮೇಳನದ ದಿನಾಂಕ ನಿಗದಿ ಕುರಿತು ಉಸ್ತುವಾರಿ ಸಚಿವರು ಹಾಗೂ ಕಸಾಪ ರಾಜ್ಯಾಧ್ಯಕ್ಷರು ಒಮ್ಮೆ ಸಿಎಂ ಅವರನ್ನು ಭೇಟಿಯಾಗಿದ್ದಾರೆ. ಆದರೆ ಸಿಎಂ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಅವಾಂತರ ಶುರುವಾಗಿದ್ದು, ಸಮ್ಮೇಳನ ಆಯೋಜಿಸಿದರೆ ತೊಂದರೆ ಎದುರಾಗಬಹುದು ಎಂಬ ಬಗ್ಗೆ ಆತಂಕವಿದೆ. ನವಂಬರ್, ಡಿಸೆಂಬರ್ ತಿಂಗಳಲ್ಲಿ ಸಮ್ಮೇಳನ ಆಯೋಜಿಸುವುದು ಸೂಕ್ತವಾಗಿದ್ದು, ಮುಖ್ಯಮಂತ್ರಿಗಳು ಕೈಗೊಳ್ಳುವ ತೀರ್ಮಾನದ ಮೇಲೆ ಎಲ್ಲವೂ ನಿಂತಿದೆ. -ಲಿಂಗಯ್ಯ ಹಿರೇಮಠ,ಕಸಾಪ ಜಿಲ್ಲಾಧ್ಯಕ್ಷ
ವೀರೇಶ ಮಡ್ಲೂರ