ಹಾವೇರಿ: ಕಾನೂನುಗಳನ್ನು ಕತ್ತಿಯಂತೆ ಉಪಯೋಗಿಸಿಕೊಳ್ಳದೇ ಗುರಾಣಿಯಂತೆ ಬಳಸಿಕೊಳ್ಳಬೇಕು. ಸಂಸಾರದಲ್ಲಿ ಬರುವ ಸಣ್ಣಪುಟ್ಟ ಮನಸ್ತಾಪಗಳಿಗೆ ನ್ಯಾಯಾಲಯಗಳ ಮೆಟ್ಟಿಲು ಹತ್ತುವ ಬದಲಾಗಿ ತಮ್ಮ ತಮ್ಮಲ್ಲೇ ಸಹನೆ ಹಾಗೂ ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯದ ಕದ ತಟ್ಟಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಎಸ್.ರೇಣುಕಾದೇವಿ ಹೇಳಿದರು.
ತಾಲೂಕಿನ ಗಳನಾಥ ಆಂಜನೇಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ, ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸರ್ಕಾರೇತರ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಮಕ್ಕಳ ಸಂರಕ್ಷಣೆ ಮತ್ತು ಮಕ್ಕಳಿಗೆ ಬಾಲ ಸ್ನೇಹಿ ಕಾನೂನು ಸೇವೆಗಳ ಯೋಜನೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ವಿವಿಧ ಜಾತಿ, ಧರ್ಮ, ಸಂಪ್ರದಾಯಗಳು, ಆಚಾರ- ವಿಚಾರಗಳನ್ನೊಳಗೊಂಡ ವಿಶಿಷ್ಟ ಸಂಸ್ಕೃತಿ ದೇಶವಾಗಿದೆ. ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿ ಮತ್ತು ನಮ್ಮ ನೆಲದ ಕಾನೂನುಗಳ ಅರಿವು ಹೊಂದಿರಬೇಕು. ಹೆಣ್ಣು ಮಕ್ಕಳಿಗೆ 18 ವರ್ಷದ ನಂತರವೇ ವಿವಾಹ ಮಾಡಬೇಕು, ಗಂಡು ಹೆಣ್ಣು ಭೇದವಿಲ್ಲದೇ ಸಮಾನವಾಗಿ ಶಿಕ್ಷಣ ಕೊಡಿಸಬೇಕು. ಕುಟುಂಬದಲ್ಲಿ ಒಂದೇ ಮಗುವಿದ್ದರೆ ಆ ಮಗುವಿನ ಪಾಲನೆ-ಪೋಷಣೆ, ಶಿಕ್ಷಣ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ನಾವು ಪ್ರತಿಯೊಂದಕ್ಕೂ ಸರ್ಕಾರದ ನೆರವಿಗಾಗಿ ಕಾಯದೇ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೈ.ಎಲ್. ಲಾಡಖಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ಯಾಯವಾದವರಿಗೆ ನ್ಯಾಯ ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಎಸ್‌ಸಿ, ಎಸ್‌ಟಿ ವರ್ಗಕ್ಕೆ, ವಾರ್ಷಿಕ ಆದಾಯ ರೂ. ಒಂದು ಲಕ್ಷ ಮಿತಿಯೊಳಗಿರುವ ಎಲ್ಲ ವರ್ಗದವರು, ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳಿಗೆ ತುತ್ತಾದ ನಿರಾಶ್ರಿತರು, ದೌರ್ಜನ್ಯಕ್ಕೊಳಗಾದ ಸಂತ್ರಸ್ಥರು ತಮ್ಮ ವ್ಯಾಪ್ತಿಯ ತಾಲೂಕು, ಜಿಲ್ಲಾ, ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ತಮಗಾದ ಅನ್ಯಾಯವನ್ನು ಸಂಕ್ಷಿಪ್ತವಾಗಿ ನಮೂದಿಸಿ ಸಲ್ಲಿಸಬೇಕು. ಅರ್ಜಿದಾರರಿಗೆ ನುರಿತ ವಕೀಲರನ್ನು ನೇಮಕ ಮಾಡಿ ನ್ಯಾಯ ಒದಗಿಸಿಕೊಡಲಾಗುವುದು. ಒಂದು ವೇಳೆ ಅರ್ಜಿದಾರ ಸುಳ್ಳು ಮಾಹಿತಿ ನೀಡಿದಲ್ಲಿ ಆತನಿಗೆ ಶಿಕ್ಷೆ ಸಹ ನೀಡಲಾಗುವುದು. ಪ್ರತಿಯೊಬ್ಬರೂ ಕಾನೂನಿನ ಸಾಮಾನ್ಯಜ್ಞಾನ ಹೊಂದಬೇಕು ಹಾಗೂ ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು.
ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಸವರಾಜ ಅರಬಗೊಂಡ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಪಿ.ಎಸ್.ಯಲಿಗಾರ, ಕಾರ್ಯದರ್ಶಿ ಪಿ.ಎಂ. ಬೆನ್ನೂರ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಉಪ ವ್ಯವಸ್ಥಾಪಕ ಡಾ| ಆರ್.ಎಸ್. ಹೆಗಡೆ, ಗಳಗನಾಥ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹಾಲಮ್ಮ ಹಿರೇಮಠ, ಕರ್ನಾಟಕ ಹಾಲು ಮಹಾ ಮಂಡಳಿ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಮತ್ತು ಶ್ರೀನಿವಾಸ ಇದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾದ ರಾಜೇಶ್ವರಿ ಚಕ್ಕಲೇರ ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು, ಜಿಲ್ಲಾ ಪೊಲೀಸ್ ಇಲಾಖೆ ಎಂ.ಆರ್. ಜಾಲಗಾರ ಬಾಲ ಕಾರ್ಮಿಕ ನಿರ್ಮೂಲನಾ ಕಾಯ್ದೆ, ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ, ಪೋಕ್ಸೋ ಕಾಯ್ದೆ- 2012 ಹಾಗೂ ವೇಶ್ಯಾವಾಟಿಕೆ ನಿರ್ಮೂಲನಾ ಕಾಯ್ದೆ ಕುರಿತು ಗುತ್ತಲ ಪಿಎಸ್‌ಐ ಆರ್.ಆರ್. ಚಾಲಕಬ್ಬಿ ಪೊಲೀಸ್ ದೂರು ಪ್ರಾಧಿಕಾರದ ಕುರಿತು ಉಪನ್ಯಾಸ ನೀಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಪರಿಕಲ್ಪನೆ ಬದಲಾಗಿದೆ. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. ಪ್ರತಿಯೊಬ್ಬರಲ್ಲೂ ಕಾನೂನು ಅರಿವು ಹೊಂದಬೇಕು. ಮಹಿಳೆಯರ ಸಂರಕ್ಷಣೆಗಾಗಿ ಜಾರಿಯಲ್ಲಿರುವ ಕಾನೂನುಗಳ ಅರಿವು ಪಡೆದುಕೊಳ್ಳಬೇಕು.
ಎಸ್.ಎಸ್.ರೇಣುಕಾದೇವಿ,
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು