ಹಾವೇರಿ: ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ, ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗುವ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಸಂವಿಧಾನದ ಮುಖ್ಯಸ್ಥರಾಗಿ ಬಿಜೆಪಿಯವರ ನಿರ್ದೇಶನದಂತೆ ಅವರು ಕ್ರಮ ಜರುಗಿಸಲು ಆಗಲ್ಲ, ಹೀಗಾಗಿ ಪ್ರತಿಭಟನೆ ಮಾಡಲಾಗಿದೆ ಎಂದು ಹಾವೇರಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ನಮ್ಮ ಮುಖಂಡರದ್ದು ಭಾಷೆಗಳಲ್ಲಿ ವ್ಯತ್ಯಾಸ ಆಗಿದೆ, ಬೇರೆ ರೀತಿಯ ಪ್ರತಿಭಟನೆಗೆ ನನ್ನ ಸಮ್ಮತಿ ಇಲ್ಲ. ಐವಾನ್ ಡಿಸೋಜಾ ತಪ್ಪು ಮಾಡಿದರೆ ಕಾನೂನು ಕ್ರಮ ಜರುಗಿಸಲಿ. ಆದರೆ ಅವರ ಮನೆ ಮೇಲೆ ಕಲ್ಲು ಹೊಡೆಯುವುದು ಹೇಡಿತನ. ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ಕಿಡಿಗೇಡಿಗಳು ಮಾಡಿದ ಕೆಲಸ ಅದು ಎಂದು ಟೀಕಿಸಿದರು.
ರಾಜ್ಯಪಾಲರು ದಲಿತರು ಅವರನ್ನು ಅವಮಾನ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರದು ದಲಿತರ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಆದಾಗ ಕಣ್ಣು ಮುಚ್ಚಿಕೊಂಡು ಕೂತಿದ್ದರು ಎಂದರು.
ಮೂಡಾ ಆರೋಪ ಪ್ರತ್ಯಾರೋಪ ಆಗುತ್ತಿದೆ. ದೇಸಾಯಿ ಆಯೋಗ ನೇಮಕವಾಗಿದೆ. ಆಯೋಗ ವರದಿ ಕೊಟ್ಟ ನಂತರ ವೈಟ್ನರ್ ಹಾಕಿದ್ದಾರಾ? ಇಂಕ್ ಹಾಕಿದ್ದಾರಾ, ಬ್ಲಾಕ್ ಇಂಕ್ ಹಾಕಿದ್ದಾರಾ ಎಂಬುದು ಕೂಲಂಕುಶ ತನಿಖೆ ನಡೆದ ಬಳಿಕ ಗೊತ್ತಾಗುತ್ತದೆ. ತನಿಖೆ ಆಗುವವರೆಗೆ ಕಾಯಬೇಕು ಎಂದರು.
ನೂರು ಸಿಎಂ ಬಂದರೂ ನನ್ನನ್ನು ಬಂಧಿಸಲು ಆಗಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿಎಂ ಯಾರನ್ನೂ ಅರೆಸ್ಟ್ ಮಾಡಲ್ಲ, ಅರೆಸ್ಟ್ ಮಾಡುವುದು ಪೊಲೀಸರು. ಕುಮಾರಸ್ವಾಮಿ ಕೇಂದ್ರ ಸಚಿವರು. ಅವರ ಅಂತಸ್ಥಿಗೆ ತಕ್ಕಂತೆ ಯಾರಾದರೂ ಐಪಿಎಸ್ ಅಧಿಕಾರಿ ಹೋಗಿ ಪ್ರಶ್ನೆ ಮಾಡುತ್ತಾರೆ. ಕಾನ್ಸಟೇಬಲ್ ಹೋಗಿ ಮಾಡಲು ಆಗದು. ಪ್ರಜಾಪ್ರಭುತ್ವದಲ್ಲಿ ಯಾರೂ ಯಾರನ್ನು ಹೆದರಿಸಲು ಆಗಲ್ಲ ಎಂದು ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲೇ ಸಿದ್ದರಾಮಯ್ಯಗೆ ಬಗಲ್ ಮೇ ಚೂರಿ ಹಾಕುವವರಿದ್ದಾರೆ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ಆರ್ ಅಶೋಕ್ ಅವರು ಬಸನಗೌಡ ಪಾಟೀಲ್ ಯತ್ನಾಳಗೆ ಏನು ಉತ್ತರ ಕೊಡುತ್ತಾರೆಂದು ಕೇಳಿ, ಸಿ.ಟಿ ರವಿಯವರ ಹೇಳಿಕೆಗೆ ಮೊದಲು ಉತ್ತರ ಕೊಡಲಿ. ಅಶೋಕ್ ಮೊದಲು ಹಿಂದಿ ಚೆನ್ನಾಗಿ ಕಲಿಯಲಿ. ಬಗಲ್ ಮೆ ಚೂರಿ ಅಲ್ಲ, ಬಿಜೆಪಿಯಲ್ಲಿ ಮೈಯೆಲ್ಲಾ ಚೂರಿ ಇದೆ. ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ಹಾಕೊಂಡಿರುವುದು ಯಾರಂತೆ? ಅತಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ನಾಯಕರು ವಿಜಯೇಂದ್ರ, ಅಶೋಕ್ ಅವರ ವಿರುದ್ಧ ಬೆಂಕಿ ಕಾರುತ್ತಿದ್ದಾರೆ. ಈಗಾಗಲೇ ಹಲವು ಸಭೆಗಳಾಗಿದೆ ಎಂದರು.