ಹಾವೇರಿ: ನಾಗರಿಕರು, ಶಿಕ್ಷಕರು ಮತ್ತು ಸಮಾಜ ಕಾರ್ಯಕರ್ತರು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಶ್ರಮಪಡಬೇಕು. ಕೌಟುಂಬಿಕ, ಸಾಮಾಜಿಕ ಮತ್ತು ದೇಶದ ಸ್ವಾಸ್ಥ್ಯ ಕಾಪಾಡಲು ಕಂಕಣ ಬದ್ಧರಾಗಬೇಕು ಎಂದು ಕವಿವಿ ಸ್ನಾತ್ತಕೋತ್ತರ ಕೇಂದ್ರದ ಪ್ರಭಾರ ಆಡಳಿತಾಧಿಕಾರಿ ಪ್ರಶಾಂತ ಎಚ್.ವೈ. ಹೇಳಿದರು.
ಕೆರಿಮತ್ತಿಹಳ್ಳಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಅಧ್ಯಯನ ವಿಭಾಗ, ಹಾವೇರಿಯ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಕ್ಕಳ ಸಹಾಯವಾಣಿ ಕೇಂದ್ರಗಳ ಸಹಯೋಗದಲ್ಲಿ ಹಾವೇರಿಯ ಶ್ರೀ ಬಸವೇಶ್ವರ ಬಿಇಡಿ ಶಿಕ್ಷಣ ಸಂಸ್ಥೆ, ಹೊಸಮಠದ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಫೋಕ್ಸೋ ಕಾಯ್ದೆ-2012 ಮತ್ತು ಸೈಬರ್ ಆನ್‌ಲೈನ್ ಸುರಕ್ಷತೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಬದುಕನ್ನು ಬೋಧಿಸುವ ಶಿಕ್ಷಕರು ತರಗತಿ ಕೊಠಡಿಯ ಒಳಗೂ-ಹೊರಗೂ ಅವರನ್ನು ರಕ್ಷಿಸುವ ಕಾಯಕ ಮಾಡಬೇಕು. ಯುವಜನತೆ ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಆತಂಕ ಪಡುವ ವಿಷಯವಾಗಿದ್ದು, ಅದರಲ್ಲೂ 18 ರಿಂದ 30 ವರ್ಷ ವಯೋಮಾನದ ಯುವಕರೇ ಬಹುಪಾಲು ಸೈಬರ್ ಅಪರಾಧ ಎಸಗುತ್ತಿದ್ದಾರೆ. ಅಷ್ಟೇ ಅಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ತಮ್ಮದೇ ಕುಟುಂಬ ಸದಸ್ಯರು, ಹತ್ತಿರದ ರಕ್ತ ಸಂಬಂ ಧಿಗಳು, ವಿದ್ಯೆ ಕಲಿಸುವ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಮನುಷ್ಯ ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಹಾವೇರಿಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಮಾತನಾಡಿ, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಆನ್‌ಲೈನ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಯುವಜನತೆ ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಂಡು ತಮ್ಮ ಸುತ್ತಮುತ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿ ಅಥವಾ ಮಕ್ಕಳ ಸಹಾಯವಾಣಿಯ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.
ಶ್ರೀ ಬಸವೇಶ್ವರ ಬಿಇಡಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಾಲತೇಶ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಹಾಯವಾಣಿ ಕೇಂದ್ರದ ಜಿಲ್ಲಾ ಸಂಯೋಜಕ ಶಿವರಾಜ ‘ಫೋಕ್ಸೋ ಕಾಯ್ದೆ- 2012 ಮತ್ತು ಸೈಬರ್ ಆನ್‌ಲೈನ್ ಸುರಕ್ಷತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜಕಾರ್ಯ ವಿಭಾಗದ ಬೋಧಕ ರಾಹುಲ್ ಮುರಗೋಡ, ರಾಜವರ್ಧನ ಹೊಸಮನಿ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ದೀಪಾ ಎನ್.ಆರ್. ಸ್ವಾಗತಿಸಿದರು. ವೀಣಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಅಕ್ಷತಾ ಭಟ್ಟಿ ವಂದಿಸಿದರು.