Advertisement

Haveri: ಕೆರೆ ತುಂಬಿಸೋ ಕಾಮಗಾರಿ ಮಂದಗತಿ

06:37 PM Dec 20, 2023 | Team Udayavani |

ಹಾವೇರಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಮಂಜೂರಾತಿ ಪಡೆದು ಆರಂಭವಾಗಿದ್ದ ವಿವಿಧ ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿ ಮಂದಗತಿಯಲ್ಲಿ ಸಾಗಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅನೇಕ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಅನುದಾನವನ್ನೂ ಮೀಸಲಿಡಲಾಗಿತ್ತು.

Advertisement

ಆದರೆ, ಎರಡು ವರ್ಷಗಳ ಕಾಲ ಕಾಡಿದ ಕೊರೊನಾ ಹೆಮ್ಮಾರಿ ಕಾರಣದಿಂದ ಆಗಲೇ ಮುಗಿಯಬೇಕಿದ್ದ ಕಾಮಗಾರಿಗಳು ಈಗಲೂ ಮಂದಗತಿಯಲ್ಲಿ ಸಾಗುತ್ತಿವೆ. ಹಿರೇಕೆರೂರ ತಾಲೂಕಿನ 88 ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ 185 ಕೋಟಿ ರೂ. ವೆಚ್ಚದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆಗೆ 2020ರ ನವೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಗೆ ಜ್ಯಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ನೀರು ತಂದು ಕೆರೆ ತುಂಬಿಸುವ ಯೋಜನೆ ಇದಾಗಿದ್ದು, 18 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೆ ಕೇವಲ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಶೇ. 60ರಷ್ಟು ಕಾಮಗಾರಿ ನಡೆಯಬೇಕಿದೆ.

ಬಾಳಂಬೀಡ ಸೇರಿ 162 ಕೆರೆ ತುಂಬಿಸುವ ಯೋಜನೆ:
ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದ ಕೆರೆ ಸೇರಿ ತಾಲೂಕಿನ 162 ಕೆರೆ ತುಂಬಿಸುವ ನಿಟ್ಟಿನಲ್ಲಿ 418 ಕೋಟಿ ವೆಚ್ಚದಲ್ಲಿ ವರದಾ ನದಿಗೆ ಜ್ಯಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ಕೆರೆ ತುಂಬಿಸುವ ಯೋಜನೆಗೆ 2019ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು.ಮಳೆಗಾಲ ಸೇರಿ 24 ತಿಂಗಳಲ್ಲಿ ಈ ಕಾಮಗಾರಿ ಮುಗಿಯಬೇಕಿತ್ತು. ಅಂದರೆ 2021ರ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳಬೇಕಿತ್ತು. ಆದರೀಗ ಈ ಯೋಜನೆ ಮುಗಿಯುವ ಹಂತಕ್ಕೆ ಬಂದಿದ್ದು, ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ.

ಮೆಡ್ಲೆರಿ ಸೇರಿ 19 ಕೆರೆ ತುಂಬಿಸುವ ಯೋಜನೆ: 
ರಾಣಿಬೆನ್ನೂರ ತಾಲೂಕಿನ ಮೆಡ್ಲೆàರಿ ಮತ್ತು ಇತರೆ 19 ಕೆರೆ ತುಂಬಿಸುವ ನಿಟ್ಟಿನಲ್ಲಿ 214 ಕೋಟಿ ರೂ. ವೆಚ್ಚದಲ್ಲಿ 2022ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈ ಕಾಮಗಾರಿ 18 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೆ ಕೇವಲ ಶೇ. 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಬುಳ್ಳಾಪುರ-ಹಾಡೆ ಕೆರೆ ತುಂಬಿಸುವ ಯೋಜನೆ:
ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ-ಹಾಡೆ ಇತರೆ 7 ಕೆರೆ ತುಂಬಿಸುವ ನಿಟ್ಟಿನಲ್ಲಿ 21.11ಕೋಟಿ ವೆಚ್ಚದಲ್ಲಿ 2023ರ ಮಾರ್ಚ್‌ನಲ್ಲಿ ಚಾಲನೆ ನೀಡಲಾಗಿದೆ. ಮಳೆಗಾಲ ಸೇರಿ 15 ತಿಂಗಳ ಅವ ಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಈವರೆಗೆ ಕೇವಲ ಶೇ. 10ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಈ ನಾಲ್ಕೂ ಕೆರೆ ತುಂಬಿಸುವ ಯೋಜನೆಗಳು ಪೂರ್ಣಗೊಂಡರೆ 276ಕ್ಕೂ ಹೆಚ್ಚು ಕೆರೆಗಳು ತುಂಬಿ ಜಿಲ್ಲೆಯ ನೀರಿನ ಸಮಸ್ಯೆ ನೀಗಲಿದೆ.

Advertisement

ವಿವಿಧ ಕಾರಣಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿರುವ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಟ್ಟು ಕಾಮಗಾರಿ ವೇಗ ಹೆಚ್ಚಿಸುವಂತೆ ತಾಕೀತು ಮಾಡಿದ್ದರು. ಅಧಿಕಾರಿಗಳು, ಗುತ್ತಿಗೆದಾರರು ಈ ಯೋಜನೆಗಳಿಗೆ ನಿಗಾ ವಹಿಸಿ ಕೆಲಸ ನಿರ್ವಹಿಸಿ ಬರುವ ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿದರೆ ಮುಂಬರುವ ಮಳೆಗಾಲದಲ್ಲಿ ಈ ಕೆರೆಗಳಿಗೆ ನೀರು ಹರಿದು ಬರಲಿದೆ ಎಂಬುದು ರೈತರ ಆಶಾಭಾವನೆಯಾಗಿದೆ.

ಸರ್ವಜ್ಞ ಏತ ನೀರಾವರಿ ಯೋಜನೆ ಕಾಮಗಾರಿ ಕೇವಲ ಶೇ.40ರಷ್ಟು ಪೂರ್ಣಗೊಂಡಿದೆ. ಬರುವ ಫೆಬ್ರವರಿಯಲ್ಲಿ ಪೂರ್ಣಗೊಳಿಸಬೇಕು. ಈ ಕುರಿತು ಜಿಲ್ಲಾಧಿ ಕಾರಿಗಳಿಗೆ ಲಿಖೀತ ಪತ್ರ ನೀಡುವಂತೆ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ.
ಮೆಡ್ಲೆರಿ ಏತ ನೀರಾವರಿ ಯೋಜನೆ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದೆ. ಬುಳ್ಳಾಪುರ ಹಾಡೆ ಇತರ ಏಳು ಕೆರೆಗಳನ್ನು
ತುಂಬಿಸುವ ಕಾಮಗಾರಿ ಶೇ.40ರಷ್ಟು ಮಾತ್ರ ಪೂರ್ಣಗೊಂಡಿದೆ. ಕಾಮಗಾರಿ ವಿಳಂಬವಾಗಿರುವುದರಿಂದ ನಿಗದಿತ ಕಾಲಾವ ಧಿಗೆ ಮುನ್ನವೇ ಈ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲು ಸಂಬಂಧಿಸಿದ ಅಭಿಯಂತರರಿಗೆ ನಿರ್ದೇಶನ ನೀಡಲಾಗಿದೆ.
*ಶಿವಾನಂದ ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next