ಎಚ್.ಕೆ. ನಟರಾಜ
ಹಾವೇರಿ: ಸಿಎಂ ಯಡಿಯೂರಪ್ಪ ಅವರ ಭೇಟಿ ಹಿರೇಕೆರೂರು ಕ್ಷೇತ್ರದ ಉಪಚುನಾವಣಾ ಕಣ ರಂಗೇರಿಸಲಿದ್ದು ಕಾರ್ಯಕರ್ತರ ಉತ್ಸಾಹ, ಚಟುವಟಿಕೆ ಚುರುಕುಗೊಳ್ಳಲಿದೆ. ರಾಜಕೀಯ ಬದ್ಧವೈರಿಗಳಾಗಿದ್ದ ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕೆ ಸಿಎಂ ಯಡಿಯೂರಪ್ಪ ಸಾಕ್ಷಿಯಾಗಲಿದ್ದಾರೆ.
ಅವರ ಈ ಭೇಟಿಯಿಂದ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಪಡೆಯುವ ಸಾಧ್ಯತೆ ಇದೆ. ರಾಜಕಾರಣದ ಪ್ರತಿ ಹಂತದಲ್ಲೂ ಪ್ರತ್ಯೇಕವಾಗಿ ಸಮಾವೇಶ, ಕಾರ್ಯಕ್ರಮಗಳನ್ನು ಮಾಡಿ ಜನಶಕ್ತಿ ಪ್ರದರ್ಶಿಸುತ್ತಿದ್ದ ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಅವರು ಈಗ ಸಿಎಂ ಯಡಿಯೂರಪ್ಪ ಆಗಮನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರೂ ಸೇರಿ ಜಂಟಿಯಾಗಿ ಕೃತಜ್ಞತಾ ಸಮಾವೇಶ ಸಂಘಟಿಸಿದ್ದಾರೆ.
ಈ ಸಮಾವೇಶದಲ್ಲಿ ಇಬ್ಬರ ನಾಯಕರ ಜನಶಕ್ತಿ ಒಂದುಗೂಡಲಿದೆ. ಈ ಶಕ್ತಿ ಉಪಚುನಾವಣೆಯಲ್ಲಿ ಲಾಭ ತಂದುಕೊಡಲಿದೆ ಎಂಬ ಲೆಕ್ಕಾಚಾರ ನಾಯಕರದ್ದಾಗಿದೆ. ಉಪಚುನಾವಣೆಯಲ್ಲಿ ಬಿ.ಸಿ. ಪಾಟೀಲ ಬಿಜೆಪಿಯಿಂದ ಸ್ಪರ್ಧಿಸುತ್ತಾರೆಂಬ ವಿಚಾರ ಖಚಿತವಾಗುತ್ತಿದ್ದಂತೆ ಇದಕ್ಕೆ ಮಾಜಿ ಶಾಸಕ ಯು.ಬಿ. ಬಣಕಾರ ಹಾಗೂ ಅವರ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು ಆಗ ಬಣಕಾರ ಅವರನ್ನು ಮನವೊಲಿಸಲು ಪಕ್ಷ ಅವರಿಗೆ ನಿಗಮವೊಂದರ ಅಧ್ಯಕ್ಷ ಸ್ಥಾನ ನೀಡಿತು. ಆದರೆ, ಬಣಕಾರ ಇದನ್ನು ಒಪ್ಪಿಕೊಳ್ಳದೇ ನಿಗಮ ಅಧ್ಯಕ್ಷ ಸ್ಥಾನ ನಿರಾಕರಿಸಿದರು. ಉಪ ಚುನಾವಣೆಯಲ್ಲಿ ತಮಗೇ ಟಿಕೆಟ್ ಸಿಗಬೇಕೆಂಬ ಸಂದೇಶವನ್ನು ಕಾರ್ಯಕರ್ತರ ಮೂಲಕ ಹೈಕಮಾಂಡ್‌ಗೆ ಕಳುಹಿಸಿದ್ದರು. ಬಳಿಕ ಹೈಕಮಾಂಡ್ ಎರಡನೇ ಬಾರಿ ಬಣಕಾರ ಅವರ ಮನವೊಲಿಸುವ ಪ್ರಯತ್ನ ನಡೆಸಿ, ಅದರಲ್ಲಿ ಯಶಸ್ವಿಯಾಯಿತು. ಇದರ ಪರಿಣಾಮ ಬಣಕಾರ ನಿಗಮದ ಅಧ್ಯಕ್ಷ ಸ್ಥಾನ ಅಲಂಕರಿಸಿದರು.
ತಮ್ಮ ಮಾತಿನ ವರಸೆ ಬದಲಾಯಿಸಿ ಅಭಿವೃದ್ಧಿ ಹೆಸರಲ್ಲಿ ಒಪ್ಪಿಗೆಯ ತಂತ್ರ-ಒಗ್ಗಟ್ಟಿನ ಮಂತ್ರ ಪಠಿಸಲು ಆರಂಭಿಸಿದ್ದರು. ಎರಡು ದಿನಗಳ ಹಿಂದಷ್ಟೇ ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಇಬ್ಬರೂ ಒಂದಾಗಿದ್ದೇವೆ’ ಎಂಬ ಸಂದೇಶವನ್ನೂ ಕ್ಷೇತ್ರದ ಜನತೆಗೆ ಸಾರಿದ್ದರು. ಒಟ್ಟಾರೆ ಕ್ಷೇತ್ರದ ನಾಯಕರ ಈ ದೋಸ್ತಿಗೆ ಸಿಎಂ ಭೇಟಿ ಇನ್ನಷ್ಟು ಪುಷ್ಟಿ ತುಂಬುವ ನಿರೀಕ್ಷೆ ಇದೆ.