Advertisement

ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ : ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ

03:53 PM Jan 09, 2021 | Team Udayavani |

ಹಾವೇರಿ: ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರ ಸಂಜೆ ಸುರಿದ ಅಕಾಲಿಕ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಶುಕ್ರವಾರ ದಿನವಿಡೀ ಮೋಡ ಕವಿದ ವಾತಾವಣದಿಂದಲೇ ಕೂಡಿತ್ತು. ಸಂಜೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆ ಜನರನ್ನು ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿತು.

Advertisement

ನಗರದಲ್ಲಿ ಸಂಜೆ ತುಂತುರಾಗಿ ಪ್ರಾರಂಭಗೊಂಡ ಮಳೆ ನಂತರ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಯಿತು. ಮಳೆ ನೀರಿನಿಂದಾಗಿ ನಗರದಲ್ಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡು ಅಲ್ಲಿನ ಜನರು
ಪರದಾಡುವಂತಾಯಿತು.

ಇದನ್ನೂ ಓದಿ:ನನ್ನ ಸರ್ಕಾರದ ಯೋಜನೆಗೆ ಮರು ಚಾಲನೆ ನೀಡಿದ ಯಡಿಯೂರಪ್ಪನವರಿಗೆ ಆಭಿನಂದನೆಗಳು: ಕುಮಾರಸ್ವಾಮಿ

ನಗರದ ಹಳೆ ಪಿ.ಬಿ.ರಸ್ತೆಯಲ್ಲಿ ಮೊಳಕಾಲು ತನಕ ನೀರುನಿಂತು ಕೆಲಕಾಲ ವಾಹನ ಸಂಚಾರಕ್ಕೆ ಅಡತಡೆಯಾಯಿತು. ನಗರದ
ಗೂಗಿಕಟ್ಟಿ ಪ್ರದೇಶದಲ್ಲಿರುವ ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಯಿತು. ಶಿವಾಜಿ ನಗರ, ಶಿವಬಸವ ನಗರದ ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮನೆಗಳಿಗೆ ನುಗ್ಗಿದ ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯಿತು. ಅಕಾಲಿಕ ಮಳೆಯಿಂದಾಗಿ ನಗರದ ವಿವಿಧ ಬಡಾವಣೆಯಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿದವು. ಕೆಲವು ತಗ್ಗು ಪ್ರದೇಶಗಳಲ್ಲಿ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡಿದ್ದು ಕಂಡು ಬಂದಿತು.

ಇನ್ನು ಜಿಲ್ಲೆಯ ವಿವಿಧಡೆ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ಹಾನಿಗಿಡಾಗಿ ರೈತರು ಸಂಕಷ್ಟ ಪಡುವಂತಾಯಿತು. ಜಿಲ್ಲೆಯ
ಸವಣೂರು, ಶಿಗ್ಗಾವಿ, ಹಾನಗಲ್ಲ, ಹಿರೇಕೆರೂರು, ರಾಣೆಬೆನ್ನೂರು ತಾಲೂಕಿನಲ್ಲಿ ಮಳೆಯಾದ ಬಗ್ಗೆ ವರದಿಯಾಗಿದ್ದು, ರೈತರ ಹೊಲದಲ್ಲಿದ್ದ ಹತ್ತಿ, ಭತ್ತ, ಮೆಣಸಿನಕಾಯಿ, ಟೊಮೆಟೋ ಸೇರಿದಂತೆ ಇತರ ಬೆಳೆಗಳಿಗೆ ಹಾನಿಯಾದ್ದು, ಮತ್ತೂಮ್ಮೆ ರೈತಾಪಿ ವರ್ಗಕ್ಕೆ ಕೈಗೆ ಬಂದ ತತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಕೆಲ ರೈತರು ಈಗ ಮೆಕ್ಕೆಜೋಳದ ಕಾಳುಗಳನ್ನು ಒಣಗಿಸುತ್ತಿದ್ದು, ಅಕಾಲಿಕ ಮಳೆಯಿಂದ ಹಾನಿಯಾಗುವಂತಾಗಿದೆ. ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಪರದಾಡುವಂತಾಯಿತು. ರಾಣೆಬೆನ್ನೂರು
ತಾಲೂಕಿನ ಮಾಕನೂರು ಭಾಗದಲ್ಲಿ ಮಳೆ ಸುರಿದಿದ್ದರಿಂದ ಇಟ್ಟಂಗಿ ಬಟ್ಟಿಯಲ್ಲಿನ ಇಟ್ಟಂಗಿಗಳಿಗೆ ಹಾನಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next