Advertisement

ಭರದಿಂದ ಸಾಗಿದೆ ಗಾಂಧಿ ಭವನ ನಿರ್ಮಾಣ

01:19 PM Jul 18, 2019 | Naveen |

ಹಾವೇರಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಮೃತ ಹಸ್ತದಿಂದ ಅಡಿಗಲ್ಲು ಹಾಕಲ್ಪಟ್ಟಿದ್ದ ನಗರದ ‘ಧರ್ಮಶಾಲೆ’ ಇದ್ದ ಸ್ಥಳದಲ್ಲಿಯೇ ಭವ್ಯ ‘ಗಾಂಧಿ ಭವನ’ ನಿರ್ಮಾಣವಾಗುತ್ತಿದೆ. ಮುಂಬರುವ ಗಾಂಧಿ ಜಯಂತಿ ವೇಳೆಗೆ ಕಟ್ಟಡ ಪೂರ್ಣಗೊಳಿಸುವ ಗುರಿಯೊಂದಿಗೆ ಕಾಮಗಾರಿ ಭರದಿಂದ ಸಾಗಿದೆ.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೂರು ಕೋಟಿ ರೂ.ಗಳಲ್ಲಿ ‘ಗಾಂಧಿ ಭವನ’ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ಈ ಯೋಜನೆಯಡಿ ನಗರದಲ್ಲಿ ಭವ್ಯ ಹಾಗೂ ನೂತನ ವಿನ್ಯಾಸದೊಂದಿಗೆ ಗಾಂಧಿ ಭವನ ತಲೆ ಎತ್ತುತ್ತಿದೆ.

ಹಾವೇರಿ ಜಿಲ್ಲೆಯಲ್ಲಿನ ಗಾಂಧಿ ಹೆಜ್ಜೆಗಳು, ಜಿಲ್ಲೆಯೊಂದಿಗೆ ಗಾಂಧಿ ನಂಟು, ಗಾಂಧಿ ಸಾಹಿತ್ಯ ಹಾಗೂ ಕಲಾ ಪ್ರದರ್ಶನ ಕೊಠಡಿ, ವಸ್ತು ಸಂಗ್ರಹಾಲಯ, ತರಬೇತಿ ಕೇಂದ್ರ, ಗಾಂಧಿ ಪುತ್ಥಳಿ ಹಾಗೂ ಉದ್ಯಾನ ಈ ಭವನದಲ್ಲಿ ಇವರಲಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒಂದೇ ರೀತಿಯ ವಿನ್ಯಾಸದೊಂದಿಗೆ ಗಾಂಧಿ ಭವನ ನಿರ್ಮಿಸಲಾಗುತ್ತಿದ್ದು, ಭವನದ ವಿನ್ಯಾಸ ಆಕರ್ಷಣೀಯವಾಗಿದೆ.

ಸ್ಥಳವೂ ವಿಶೇಷ: ಭವ್ಯ ಗಾಂಧಿ ಭವನ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವುದು ಒಂದು ವಿಶೇಷವಾದರೆ, ಭವನ ನಿರ್ಮಾಣವಾಗುತ್ತಿರುವ ‘ಧರ್ಮಶಾಲೆ’ಯ ಸ್ಥಳ ಮತ್ತೂಂದು ವಿಶೇಷ. ಈ ‘ಧರ್ಮಶಾಲೆ’ ಕಟ್ಟಡಕ್ಕಾಗಿ ನಗರದ ನರಸಿಂಗರಾವ್‌ ರಾಮಚಂದ್ರರಾವ್‌ ನಾಡಿಗೇರ ಅವರು ರೈಲು ನಿಲ್ದಾಣ ಪಕ್ಕದ ಜಾಗೆಯನ್ನು ಆಗಿನ ಸ್ಥಳೀಯ ಆಡಳಿತಕ್ಕೆ ದಾನವಾಗಿ ನೀಡಿದ್ದರು. ಮಹಾತ್ಮ ಗಾಂಧಿಧೀಜಿಯವರು 1934 ಮಾರ್ಚ್‌ 1ರಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ‘ಧರ್ಮಶಾಲೆ’ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದರು. ಅಂದು ಈ ‘ಧರ್ಮಶಾಲೆ’ ಊರೂರು ಸಂಚರಿಸುವ ಸ್ವಾತಂತ್ರ್ಯ ಹೋರಾಟಗಾರಿಗೆ ಹಾಗೂ ಬೇರೆ ಊರುಗಳಿಂದ ಹಾವೇರಿ ಆಗಮಿಸುವ ಜನರಿಗೆ ತಂಗಲು ಅನುಕೂಲ ಕಲ್ಪಿಸಿತ್ತು. ಇಂಥ ಐತಿಹಾಸಿಕ ಮಹತ್ವವುಳ್ಳ ಸ್ಥಳದಲ್ಲಿಯೇ ಗಾಂಧಿ ಭವನ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಮಹಾತ್ಮ ಗಾಂಧೀಜಿಯವರ ಮೌಲ್ಯಗಳನ್ನು ವಿವಿಧ ರೀತಿಯಲ್ಲಿ ನಿರಂತರ ಪ್ರಚುರ ಪಡಿಸುವ ಗುರಿ ಹೊಂದಿರುವ ವಾರ್ತಾ ಇಲಾಖೆ, ಗಾಂಧಿ ಭವನ ನಿರ್ಮಾಣ ಹಾಗೂ ಮುಂದಿನ ಪೂರಕ ಯೋಜನೆಗಳಿಗೆ ಎರಡು ಎಕರೆ ಜಾಗೆ ಕೇಳಿತ್ತು. ಆದರೆ, ಜಿಲ್ಲಾಡಳಿತ ಸ್ಥಳ ಮೌಲ್ಯದ (ಗಾಂಧೀಜಿಯವರ ಪಾದಸ್ಪರ್ಶದ ಸ್ಥಳ) ಕಾರಣಕ್ಕಾಗಿ ಕೇವಲ 18 ಗುಂಟೆ ವಿಸ್ತೀರ್ಣ ಇರುವ ‘ಧರ್ಮಶಾಲೆ’ ಜಾಗೆಯಲ್ಲಿಯೇ ಗಾಂಧಿ ಭವನ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟಿತು. ಹೀಗಾಗಿ ನಗರದ ಮಧ್ಯವರ್ತಿ ಎನಿಸಿದ ಈ ಸ್ಥಳದಲ್ಲಿಯೇ ಭವ್ಯ ಭವನ ನಿರ್ಮಾಣಗೊಳ್ಳುತ್ತಿದೆ.

Advertisement

ಮಹಾತ್ಮ ಗಾಂಧಿಧೀಜಿ ಕುರಿತ ಪುಸ್ತಕ ಪ್ರಕಟಣೆ, ಅವರ ತತ್ವ ವಿಚಾರಗಳ ಪ್ರಚಾರ, ಅವರ ಜೀವನ ಚರಿತ್ರೆಯ ಪ್ರಸಾರ ಸೇರಿದಂತೆ ಪ್ರತಿ ವರ್ಷ ಗಾಂಧಿಧೀಜಿಯವರ ಕುರಿತು ಒಂದಿಲ್ಲೊಂದು ಕಾರ್ಯಕ್ರಮ ಹಾಕಿಕೊಂಡು ಬಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧೀಜಿಯವರ ಮೌಲ್ಯಗಳ ಪುನರುತ್ಥಾನಕ್ಕಾಗಿ ಶಾಶ್ವತ ಕಟ್ಟಡ ಹೊಂದಿ ಪ್ರತಿ ವರ್ಷ ಅರಿವು, ಅಭಿವೃದ್ಧಿ ಚಟುವಟಿಕೆ ನಡೆಸಲು ‘ಗಾಂಧಿಭವನ’ ನಿರ್ಮಾಣ ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next