Advertisement

ಫಲವತ್ತಾದ ಮಣ್ಣು ಕೊಚ್ಚಿ ಹೋಯ್ತು!

03:00 PM Aug 29, 2019 | Team Udayavani |

ಎಚ್.ಕೆ. ನಟರಾಜ
ಹಾವೇರಿ:
ಜಿಲ್ಲೆಯಲ್ಲಿ ಇತ್ತೀಚೆಗೆ ಉಲ್ಬಣಿಸಿದ ನದಿಗಳ ಪ್ರವಾಹದಿಂದ ಬರೋಬರಿ 13267 ಹೆಕ್ಟೇರ್‌ ಕೃಷಿ ಪ್ರದೇಶದ ಫಲವತ್ತಾದ ಮಣ್ಣು ಹಾಳಾಗಿದ್ದು, ಅಂದಾಜು 36.38ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ.

Advertisement

ಕೃಷಿ ಭೂಮಿಯಲ್ಲಿ ಮಣ್ಣು ಸಂಗ್ರಹ ಹಾಗೂ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದರಿಂದ ಜಿಲ್ಲೆಯಲ್ಲಿ ಶಿಗ್ಗಾವಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 7986 ಹೆಕ್ಟೇರ್‌ ಪ್ರದೇಶದ ಮಣ್ಣು ಹಾಳಾಗಿ, 23.68 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ. ಉಳಿದಂತೆ ಹಾವೇರಿ ತಾಲೂಕಿನಲ್ಲಿ 1974 ಹೆಕ್ಟೇರ್‌ (445ಲಕ್ಷ ರೂ.ಗಳಷ್ಟು ಹಾನಿ), ರಾಣಿಬೆನ್ನೂರು ತಾಲೂಕಿನಲ್ಲಿ 488 ಹೆಕ್ಟೇರ್‌ (59.54ಲಕ್ಷ ರೂ. ಗಳಷ್ಟು ಹಾನಿ), ಹಿರೇಕೆರೂರು ತಾಲೂಕಿನಲ್ಲಿ 248 ಹೆಕ್ಟೇರ್‌ (30.26ಲಕ್ಷ ರೂ. ಗಳಷ್ಟು ಹಾನಿ), ಸವಣೂರು ತಾಲೂಕಿನಲ್ಲಿ 1199 ಹೆಕ್ಟೇರ್‌ (377ಲಕ್ಷ ರೂ. ಗಳಷ್ಟು ಹಾನಿ), ಹಾನಗಲ್ಲ ತಾಲೂಕಿನಲ್ಲಿ 1372 ಹೆಕ್ಟೇರ್‌ (356ಲಕ್ಷ ರೂ. ಗಳಷ್ಟು ಹಾನಿ) ಹಾನಿ ಸಂಭವಿಸಿದೆ.

ಜಿಲ್ಲಾಡಳಿತ ಸಲ್ಲಿಸಿದ ಮೊದಲ ವರದಿಯಲ್ಲಿ ನೆರೆಯಿಂದ ಮಣ್ಣು, ಮರಳು ಕೊಚ್ಚಿಬಂದು 400 ಹೆಕ್ಟೇರ್‌ ಕೃಷಿ ಭೂಮಿ ಹಾಳಾಗಿದೆ. ನೆರೆಯಿಂದ ನದಿ ಪಾತ್ರ ಬದಲಾಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿ ಹೋಗಿ 165 ಹೆಕ್ಟೇರ್‌ ಪ್ರದೇಶದ ಮಣ್ಣು ಹಾಳಾಗಿದೆ. ಇದರಿಂದಾಗಿ ಒಟ್ಟು 1.10 ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ವರದಿ ಸಿದ್ಧಪಡಿಸಿತ್ತು. ಜನಪ್ರತಿನಿಧಿಗಳ ಕಟ್ಟುನಿಟ್ಟಿನ ಆದೇಶ ಪಾಲನೆ ಬಳಿಕ ನಡೆಸಿದ ಮರು ಸಮೀಕ್ಷೆಯಿಂದ ಈಗ ಕೃಷಿ ಭೂಮಿ ಹಾನಿ ಪ್ರಮಾಣ 13267ಹೆಕ್ಟೇರ್‌ಗೆ ಏರಿದೆ.

ರಾಷ್ಟ್ರೀಯ ಪ್ರಾಕೃತಿಕ ವಿಪತ್ತು ನಿಧಿಯಡಿ ಕೃಷಿ ಭೂಮಿಯಲ್ಲಿ ನೆರೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು, ಮರಳು ಸಂಗ್ರಹವಾದರೆ ಹೆಕ್ಟೇರ್‌ಗೆ 12,200ರೂ. ಹಾಗೂ ನದಿ ಉಕ್ಕಿ ತನ್ನ ಪಾತ್ರ ಬದಲಾಯಿಸಿ ಹಿಗ್ಗಿಸಿಕೊಂಡು ಮಣ್ಣು ಕೊಚ್ಚಿ ಹೋದರೆ ಹೆಕ್ಟೇರ್‌ಗೆ 37,500 ರೂ. ಪರಿಹಾರ ಕೊಡಲು ಅವಕಾಶವಿದೆ. ಕೃಷಿ ಇಲಾಖೆ ಸಮೀಕ್ಷೆ ಪ್ರಕಾರ ಜಿಲ್ಲೆಗೆ 36.48 ಕೋಟಿ ರೂ.ಗಳಷ್ಟು ಕೃಷಿ ಭೂಮಿಯ ಮಣ್ಣು ಪರಿಹಾರ ಸಿಗುವ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ ನೆರೆಯಿಂದ ಕೋಟ್ಯಂತರ ರೂ. ಮೌಲ್ಯದ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಅಪಾರ ಹಾನಿಯಾಗಿದ್ದು, ರೈತರು ಹೆಚ್ಚಿನ ಪರಿಹಾರ ನಿರೀಕ್ಷೆಯಲ್ಲಿದ್ದಾರೆ.

ಸರ್ಕಾರಕ್ಕೆ ವರದಿ..
ಮೊದಲ ವರದಿ ವೇಳೆ ಪ್ರಾಥಮಿಕ ಸಮೀಕ್ಷಾ ವರದಿ ನೀಡಲಾಗಿತ್ತು. ಈಗ ಮರು ಸಮೀಕ್ಷೆ ಮಾಡಲಾಗಿದ್ದು ಜಿಲ್ಲೆಯಲ್ಲಿ 13267 ಹೆಕ್ಟೇರ್‌ ಕೃಷಿ ಪ್ರದೇಶದ ಮಣ್ಣು ಹಾಳಾಗಿ, ಅಂದಾಜು 36.38ಕೋಟಿಗಳಷ್ಟು ಹಾನಿಯಾಗಿರುವ ಬಗ್ಗೆ ವರದಿ ತಯಾರಿಸಲಾಗಿದೆ. ಸರ್ಕಾರಕ್ಕೆ ಹಾನಿ ವರದಿ ಸಲ್ಲಿಸಲಾಗಿದೆ.
ಬಿ. ಮಂಜುನಾಥ
 ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಮಣ್ಣು ಹಾನಿ ದೊಡ್ಡ ನಷ್ಟ.
ನೆರೆಯಿಂದಾಗಬಹುದಾದ ಮಣ್ಣು ಹಾನಿ ದೊಡ್ಡ ನಷ್ಟವಾಗಿದೆ. ಕೃಷಿ ಭೂಮಿಯ ಫಲವತ್ತಾದ ಪದರು ಕೊಚ್ಚಿ ಕೊಂಡು ಹೋದರೆ ಅದು ಮೊದಲಿನಂತಾಗಲು ಹಲವು ವರ್ಷಗಳೇ ಬೇಕಾಗುತ್ತದೆ. ಜಿಲ್ಲೆಯಲ್ಲಿ ನೆರೆಯಿಂದ ನದಿ ಪಾತ್ರ ಹಿಗ್ಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿ ಹೋಗಿದೆ. ವಿಪತ್ತು ನಿಯಲ್ಲಿ ಮಣ್ಣು ಹಾನಿಗೆ ಪರಿಹಾರ ಕೊಡಲು ಅವಕಾಶವಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಬಸವರಾಜ ಬೊಮ್ಮಾಯಿ,
 ಗೃಹ ಸಚಿವರು.
Advertisement
Advertisement

Udayavani is now on Telegram. Click here to join our channel and stay updated with the latest news.

Next