ಹಾವೇರಿ: ಇವರು ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ಬೆಂದು ಬದುಕುತ್ತಾರೆ. ಮಳೆಗಾಲ ಬಂತೆಂದರೆ ಸಾಕು. ಇವರ ಬದುಕು ಅಕ್ಷರಶಃ ಮೂರಾಬಟ್ಟೆಯಾಗುತ್ತದೆ. ತಲೆ ಮೇಲೆ ಗಟ್ಟಿಯಾದ ಸೂರು ಇಲ್ಲದ ಇವರ ಬದುಕು, ಪ್ರತಿದಿನ ಸಂಜೆಯಾಗುತ್ತಲೇ ಕತ್ತಲಾಗುತ್ತದೆ!
Advertisement
ಇದು ಯಾವುದೋ ಕುಗ್ರಾಮದಲ್ಲಿರುವ ಜನರ ಪಡಿಪಾಟಲು ಅಲ್ಲ; ಹಾವೇರಿ ನಗರದಿಂದ ನಾಲ್ಕೈದು ಕಿಮೀ ದೂರದ ಶಾಂತಿನಗರದಲ್ಲಿರುವ ಸುಡಗಾಡ ಸಿದ್ಧ ಸಮುದಾಯದವರ ದಯನೀಯ ಸ್ಥಿತಿ. ಕಳೆದ 30-35 ವರ್ಷಗಳಿಂದ ಇಲ್ಲಿ ಚಿಕ್ಕ ಚಿಕ್ಕ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ ಸುಡಗಾಡ ಸಿದ್ಧ ಸಮುದಾಯದ 25-30 ಕುಟುಂಬದವರ ಕೂಗು ಅಕ್ಷರಶಃ ಅರಣ್ಯರೋದನವಾಗಿದೆ. ಜೋರಾಗಿ ಮಳೆ ಬಂದಾಗಲೊಮ್ಮೆ ಪರಿಹಾರ ಕೇಂದ್ರದ ಆಶ್ರಯ ಪಡೆಯುವ ಈ ಸಮುದಾಯದವರು ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಮತ್ತೆ ಪರಿಹಾರ ಕೇಂದ್ರದ ಆಶ್ರಯದಲ್ಲಿದ್ದಾರೆ.
Related Articles
Advertisement
ಸುಡಗಾಡ ಸಿದ್ಧರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಶಾಶ್ವತ ಪರಿಹಾರ ವದಗಿಸುವ ನಿಟ್ಟಿನಲ್ಲಿ ಯಾವ ಅಧಿಕಾರಿ, ಜನಪ್ರತಿನಿಧಿಯೂ ಸ್ಪಂದಿಸಿಲ್ಲ. ಮಳೆ, ಗಾಳಿ ಬಂದು ಬದುಕು ಅತಂತ್ರವಾದಾಗಲೊಮ್ಮೆ ಬಂದು ಮನೆಯ ಭರವಸೆ ಕೊಟ್ಟು ಹೋದವರು ಮತ್ತೆ ಬರುವುದು ಇವರ ಬದುಕು ಮೂರಾಬಟ್ಟೆಯಾದಾಗಲೇ.
ಹೊಲಗಳ ಮಧ್ಯೆ ಭಾಗದಲ್ಲಿರುವ ಈ ಸ್ಥಳದಲ್ಲಿ ಮಳೆ ಬಂದರೆ ನೀರು ಗುಡಿಸಲುಗಳಿಗೆ ನುಗ್ಗುತ್ತದೆ. ಮಲಗಲು ಜಾಗವಿಲ್ಲದೇ ರಾತ್ರಿವಿಡಿ ಜಾಗರಣೆ ಮಾಡುವ ದುಸ್ಥಿತಿ ಇವರದ್ದು. ಕೆಲವೊಂದು ಬಾರಿ ಮಳೆಗಾಳಿಗೆ ಗುಡಿಸಲುಗಳು ಹಾರಿ ಹೋಗಿ ಚಿಕ್ಕ ಮಕ್ಕಳು ಮಳೆಯಲ್ಲಿಯೇ ನೆನೆದು ಸಾವನ್ನಪಿದ ಘಟನೆಗಳೂ ಸಂಭವಿಸಿವೆ. ಹಾವು ಕಚ್ಚಿ ಸತ್ತ ಪ್ರಕರಣಗಳೂ ನಡೆದಿವೆ. ಏನೇ ಆದರೂ ಅಧಿಕಾರಿ, ಜನಪ್ರತಿನಿಧಿ ವರ್ಗ ಮಾತ್ರ ಇವರಿಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗದೆ ಇರುವುದು ಖೇದಕರ ಸಂಗತಿ.