ವಿಶೇಷ ವರದಿ
ಹಾವೇರಿ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತಜ್ಞ ವೈದ್ಯರಷ್ಟೇ ಅಲ್ಲ ನರ್ಸ್‌ಗಳು, ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಜಿಲ್ಲೆಯ ಜನರು ಪರದಾಡುವಂತಾಗಿದೆ.
ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಇಂಥ ಸಂದರ್ಭದಲ್ಲಂತೂ ವೈದ್ಯ, ಸಿಬ್ಬಂದಿ ಕೊರತೆ ಜನರ ಪ್ರಾಣಕ್ಕೇ ಸಂಚಕಾರ ತರುತ್ತಿದೆ. ಜಿಲ್ಲೆಯಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯ ಇಲ್ಲದೇ ಇರುವುದರಿಂದ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿಯೇ ಮರಣ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಆರೋಗ್ಯ ಸಚಿವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಚಿವರು ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿನ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಕ್ರಮ ವಹಿಸಬಹುದು ಎಂಬ ಜನರ ನಿರೀಕ್ಷೆ ಚಿಗುರೊಡೆದಿದೆ.
ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಕೋವಿಡ್ ಹಾಗೂ ಕೋವಿಡೇತರರು ಸೇರಿದಂತೆ ನಿತ್ಯ ನೂರಾರು ಜನರು ದಾಖಲಾಗುತ್ತಿದ್ದಾರೆ. ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ತಂತ್ರಜ್ಞರು, ನರ್ಸ್‌ಗಳು, ಡಿ ಗ್ರೂಪ್ ಸೇರಿದಂತೆ ನೂರಾರು ಹುದ್ದೆಗಳು ಖಾಲಿ ಇವೆ. ಅಗತ್ಯವಿರುವ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದರೂ ಟೆಕ್ನಿಷಿಯನ್ಸ್, ಅನುಭವಿ ಸಿಬ್ಬಂದಿ ಸಿಗುತ್ತಿಲ್ಲ. ತಜ್ಞ ವೈದ್ಯರಂತೂ ಲಕ್ಷ ರೂ. ವೇತನ ಕೊಡುವುದಾಗಿ ಹೇಳಿದರೂ ಬರುತ್ತಿಲ್ಲ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಸರ್ಕಾರ ಕಾಯಂ ವೈದ್ಯ, ಸಿಬ್ಬಂದಿಯನ್ನೇ ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಸಿಬ್ಬಂದಿ ಕೊರತೆ ವಿವರ: ತಾಲೂಕು ಆಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಬಹಳಷ್ಟಿದೆ. ತಾಲೂಕು ಆಸ್ಪತ್ರೆಗಳಲ್ಲಿ 67 ವೈದ್ಯರ ಹುದ್ದೆಗಳಲ್ಲಿ ಇನ್ನೂ 7 ಹುದ್ದೆ ಖಾಲಿ ಇವೆ. 71ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಲ್ಲಿ 23 ಹುದ್ದೆ ಖಾಲಿ ಇವೆ. 34 ಫಾರ್ಮಾಸಿಸ್ಟ್ ಹುದ್ದೆಗಳಲ್ಲಿ 23 ಖಾಲಿ ಇವೆ. ಕಿರಿಯ ಆರೋಗ್ಯ ಸಹಾಯಕರ 316 ಹುದ್ದೆಗಳಲ್ಲಿ 73 ಖಾಲಿ ಇವೆ. ಗ್ರೂಪ್ ಡಿ 430 ಹುದ್ದೆಗಳಲ್ಲಿ 98 ಹುದ್ದೆ ಭರ್ತಿಯಾಗಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ 15 ದಿನಗಳ ಹಿಂದಷ್ಟೇ 30 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಆದರೂ ಇನ್ನೂ ಸುಮಾರು 30 ಹುದ್ದೆ ಅಗತ್ಯವಿದೆ.
ಜಿಲ್ಲಾಸ್ಪತ್ರೆಯಲ್ಲಿ ಸದ್ಯ ವೈದ್ಯರ ಕೊರತೆ ಹೆಚ್ಚಿಲ್ಲವಾದರೂ ಟೆಕ್ನಿಷಿಯನ್ಸ್, ನರ್ಸ್‌ಗಳ ಕೊರತೆ ಬಹಳಷ್ಟಿದೆ. ಸದ್ಯ ಇರುವಷ್ಟು ಸಿಬ್ಬಂದಿಯೇ ಸಾಧ್ಯವಾದಷ್ಟು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಒಟ್ಟಾರೆ ಸರ್ಕಾರ ಮಂಜೂರಾಗಿರುವ ಹುದ್ದೆಗಳನ್ನು ಸಹ ತುಂಬದೇ ಇರುವುದರಿಂದ ಇರುವ ಸಿಬ್ಬಂದಿ ಮೇಲೆ ಒತ್ತಡವೂ ಹೆಚ್ಚುತ್ತಿದೆ. ಕೋವಿಡ್ ತುರ್ತು ಸಂದರ್ಭದಲ್ಲಿ ಅನೇಕರು ರಜೆ ರಹಿತ ಸೇವೆ ನೀಡುತ್ತಿದ್ದು, ಸರ್ಕಾರ ಕೂಡಲೇ ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ತುಂಬಲು ಕ್ರಮ ವಹಿಸಬೇಕಿದೆ.