Advertisement

Haveri: ಮಕ್ಕಳ ಪ್ರತಿಭಾ ಅನ್ವೇಷಣೆ ಅಗತ್ಯ – ನಿರಂಜನ ಗುಡಿ

05:51 PM Sep 07, 2023 | Team Udayavani |

ಹಾನಗಲ್ಲ: ವಿದ್ಯಾರ್ಥಿಗಳಲ್ಲಿನ ಪ್ರತಿಭೆಯ ಅನ್ವೇಷಣೆ ಇಂದಿನ ತೀರ ಅಗತ್ಯತೆಯಾಗಿದೆ. ಮಕ್ಕಳ ಮನಸ್ಸು ಅರಳಿಸುವ ಓದು, ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಬಲ್ಲರು ಎಂದು ಕುವೆಂಪು ಸಿರಿಗನ್ನಡ ಭಾಷಾ ಸಂಘದ
ಮಾರ್ಗದರ್ಶಕ ಶಿಕ್ಷಕ ನಿರಂಜನ ಗುಡಿ ಹೇಳಿದರು.

Advertisement

ಪಟ್ಟಣದ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಕುವೆಂಪು ಸಿರಿಗನ್ನಡ ಭಾಷಾ ಸಂಘ ಆಯೋಜಿಸಿದ್ದ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳನ್ನು ಕೀಳರಿಮೆಯಿಂದ ನೋಡಲಾಗದು. ಅವರಲ್ಲಿನ
ಪ್ರತಿಭೆಯನ್ನು ಅರಿಯಬೇಕಾದರೆ ಒಳ್ಳೆಯ ಅವಕಾಶಗಳನ್ನು ನೀಡಬೇಕು. ಉತ್ತಮ ಓದು, ಆಟ, ಪಾಠಗಳಿಗೆ
ಪ್ರೋತ್ಸಾಹಿಸಬೇಕೆಂದರು.

ಎಸ್‌. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಕೃತಿ ಪರಿಚಯಿಸಿ ಮಾತನಾಡಿದ ವಿದ್ಯಾರ್ಥಿನಿ ಸಂಜನಾ ಹಳೇಕೋಟಿ, ಬದುಕಿನಲ್ಲಿ ಅಸಾಧ್ಯವಾದುದಿಲ್ಲ. ಸಾಧಿಸುವ ಛಲ ಬೇಕು. ಕೈ ಕಟ್ಟಿ ಕುಳಿತುಕೊಳ್ಳುವುದು ಬೇಡ. ಕೆಲಸದಲ್ಲಿ ಶ್ರದ್ಧೆ ಇರಲಿ. ಅದರೊಂದಿಗೆ ಸಾಮಾಜಿಕವಾಗಿ ಬೆಳೆದು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂಬ ಸತ್ಯ ಸಂಗತಿಗಳು ಇಲ್ಲಿವೆ ಎಂದರು.

ವಿಜಯಕುಮಾರ ಅವರ ಸುಮ್ಮನಿರಬಾರದೆ ಕೃತಿ ಪರಿಚ ಯಿಸಿದ ವಿದ್ಯಾರ್ಥಿನಿ ಮಹಾಲಕ್ಷ್ಮೀ ಕುನಾಸನಳ್ಳಿಮಠ, ಬದುಕಿನ ಗೊಂದಲಗಳಿಗೆ ಪರಿಹಾರ ಸುಮ್ಮನಿರುವುದೇ ಆಗಿದೆ. ಎಲ್ಲದಕ್ಕೂ ಪ್ರತ್ಯುತ್ತರ ನೀಡುವ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಗಳ ಪರಾಮರ್ಶೆ ಬೇಕು. ಸತ್ಯದ ಹುಡುಕಾಟವಾಗಬೇಕು. ಗೆಲುವಿನ ಮೂಲ ಸುಮ್ಮನಿದ್ದು ವಾಸ್ತವದ ಹುಡುಕಾಟ ಮಾಡುವುದಾಗಿದೆ.

ಸುಮ್ಮನಿರುವುದರಿಂದ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು. ಎ.ಆರ್‌.ಮಣಿಕಾಂತ ಅವರ ಅಪ್ಪ ಅಂದ್ರೆ ಆಕಾಶ ಕೃತಿ ಕುರಿತು
ಮಾತನಾಡಿದ ಅನನ್ಯ ಪಾಟೀಲ, ಮಕ್ಕಳೊಂದಿಗಿನ ಪಾಲಕರ ಸಂಬಂಧ ಹಳಸುತ್ತಿವೆ. ಮಕ್ಕಳಿಗಾಗಿ ಪಾಲಕರು ಸಮಯ ಕೊಡಬೇಕು. ವ್ಯಕ್ತಿ ಪ್ರೀತಿಸುವ ಬದಲು ವಸ್ತುವಿನ ಪ್ರೀತಿ ಆರಂಭವಾಗಿರುವುದೇ ದುರಂತ ಎಂದರು.

Advertisement

ಕುವೆಂಪು ಸಿರಿಗನ್ನಡ ಭಾಷಾ ಸಂಘದ ಅಧ್ಯಕ್ಷೆ ರೂಪಾ ಕಂಡೂನವರ ಎ.ಆರ್‌. ಮಣಿಕಾಂತ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಕೃತಿ ಕುರಿತು ಮಾತನಾಡಿ, ತಾಯಿ ಕಷ್ಟಗಳ ಸತ್ಯ ಮರೆಮಾಚಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ನೋವುಗಳನ್ನು ಮುಚ್ಚಿಟ್ಟು ಪ್ರೀತಿ ಹಂಚುತ್ತಾಳೆ. ತಾಯಿಯೇ ದೇವರು ಎಂದರು. ಋಷಿಪ್ರಭಾಕರ ಅವರ ಲಿವ್‌ ಲೈಫ್‌ ಕಿಂಗ್‌ ಸೈಜ್‌ ಕೃತಿ ಪರಿಚಯಿಸಿದ ಊರ್ವಿ ಪಾಟೀಲ, ಅರೋಗ್ಯದ ಸೂತ್ರಗಳ ಕುರಿತು ತಿಳಿಸಿದರು.

ಮನಸ್ಸಿನ ಸಂತೋಷಕ್ಕೆ ನಮ್ಮ ಚಟುವಟಿಕೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ, ದುಡ್ಡು ಮಾತ್ರ ಸಂತೋಷ ನೀಡಲಾರದು ಎಂದರು. ಸ್ಫೂರ್ತಿ ಹಾಲಭಾವಿ ಸ್ವಾಗತಿಸಿ, ಚೇತನಾ ಮಡಿವಾಳರ ನಿರೂಪಿಸಿ, ತ್ರಿಷಾ ಮಲ್ಲಾಡದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next