ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಪರ್ವತಸಿದ್ಧಗೇರಿಯಿಂದ ಪರಾರಿಯಾಗಿದ್ದ ಕೋವಿಡ್ ಸೋಂಕಿತ ಯುವಕ ಸೋಮವಾರ ರಾಣಿಬೆನ್ನೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಪೊಲೀಸರು ಆತನನ್ನು ಕೊವಿಡ್ ಆಸ್ಪತ್ರೆಗೆ ಕರೆ ತಂದಿದ್ದಾರೆ.
ರಟ್ಟೀಹಳ್ಳಿ ತಾಲೂಕಿನ ಪರ್ವತಸಿದ್ದಗೇರಿ ಗ್ರಾಮದ 29 ವರ್ಷದ ಯುವಕನಿಗೆ ಜು.4ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲೆಂದು ಕರೆತರಲು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಹೋದಾಗ ಈತ ಪರಾರಿಯಾಗಿದ್ದನು.
ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಈತನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಈತನ ಮೊಬೈಲ್ ಲೊಕೇಶನ್ ಜಾಡು ಹಿಡಿದ ಪೊಲೀಸರು ವಿವಿಧೆಡೆ ಸುತ್ತಾಡಿದ್ದಾರೆ. ಒಮ್ಮೆ ಚಿತ್ರದುರ್ಗ, ಬೆಂಗಳೂರು ಹೀಗೆ ವಿವಿಧೆಡೆ ಲೊಕೇಶನ್ ತೋರಿಸಿತ್ತು. ಅಲ್ಲಿಗೆ ಪೊಲೀಸರು ಹೋಗಿ ಹುಡುಕಿದರೂ ಸಿಕ್ಕಿರಲಿಲ್ಲ. ಆದರೆ, ಸೋಮವಾರ ರಾಣಿಬೆನ್ನೂರಿ ಬಸ್ ನಿಲ್ದಾಣದಲ್ಲಿ ಸುತ್ತಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಮುಂಜಾಗ್ರತಾ ಕ್ರಮ ವಹಿಸಿ ಆತನನ್ನು ಪೊಲೀಸರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಆತ ಹಲವರಿಗೆ ಸೋಂಕು ಹರಡಿರುವ ಸಾಧ್ಯತೆಯಿದ್ದು ವಿಚಾರಣೆ ನಡೆಸಲಾಗುತ್ತಿದ್ದು ಮಾಹಿತಿ ಕಲೆಹಾಕಿ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ರಟ್ಟೀಹಳ್ಳಿ ಠಾಣೆಯಲ್ಲಿ ಈತನ ವಿರುದ್ಧ ಆರೋಗ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು.