Advertisement

ಅವರಿಗೆ ಖುಷಿ..ಇವರಿಗೆ ಕಸಿವಿಸಿ..

06:12 PM Oct 11, 2019 | Naveen |

„ಎಚ್‌.ಕೆ. ನಟರಾಜ
ಹಾವೇರಿ: ರಾಜ್ಯದ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸಲು ಕಾರಣರಾದ ಅನರ್ಹ ಶಾಸಕರನ್ನು ಓಲೈಸಲು ಹಾಗೂ ಅನರ್ಹ ಶಾಸಕ ಕ್ಷೇತ್ರದಲ್ಲಿರುವ ಪಕ್ಷದ ಮಾಜಿ ಶಾಸಕರನ್ನು ಸಮಾಧಾನ ಪಡಿಸಲು ಸರ್ಕಾರ, ನಿಗಮ-ಮಂಡಳಿ ಸ್ಥಾನಮಾನ ಹಂಚಿಕೆ ಮಾಡಿದ್ದು, ಇದಕ್ಕೆ ಹಿರೇಕೆರೂರು ಕ್ಷೇತ್ರದಲ್ಲಿ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ.

Advertisement

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಗುರಿಯೊಂದಿಗೆ ಸರ್ಕಾರ, ಅನರ್ಹ ಶಾಸಕ ಬಿ.ಸಿ. ಪಾಟೀಲ ಅವರ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಯು.ಬಿ. ಬಣಕಾರ ಅವರಿಗೆ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ.

ತನ್ಮೂಲಕ ಅನರ್ಹ ಶಾಸಕ ಬಿ.ಸಿ. ಪಾಟೀಲರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ಖಚಿತ ಎಂಬ ಸಂದೇಶ ನೀಡಿದೆ. ಆದರೆ, ಸರ್ಕಾರದ ಈ ನಿರ್ಧಾರವನ್ನು ಬಿ.ಸಿ. ಪಾಟೀಲ ಬೆಂಬಲಿಗರು ಮಾತ್ರ ಸ್ವಾಗತಿಸುತ್ತಿದ್ದು, ಮಾಜಿ ಶಾಸಕ ಯು.ಬಿ. ಬಣಕಾರ ಬೆಂಬಲಿಗರು ತಿರಸ್ಕರಿಸುತ್ತಿರುವುದು ಉಭಯ ನಾಯಕರನ್ನು ಗೊಂದಲದಲ್ಲಿ ಸಿಲುಕಿಸಿದಂತಾಗಿದೆ.

ನಿಗಮದ ಅಧಿಕಾರ ನೀಡಿ ಅನರ್ಹರನ್ನು ಓಲೈಸುವ, ಉಪ ಚುನಾವಣೆಯ ಟಿಕೆಟ್‌ ಆಕಾಂಕ್ಷಿ ಮುಖಂಡರನ್ನು ಸಂತೈಸುವ ಸರ್ಕಾರದ ಈ ಅಧಿಕಾರ ಹಂಚಿಕೆಯ ನಿರ್ಧಾರ, ಬಿ.ಸಿ. ಪಾಟೀಲ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಖುಷಿ ಮೂಡಿಸಿದೆ.

ಮುಂದಿನ ಉಪ ಚುನಾವಣೆಯಲ್ಲಿ ಬಿ.ಸಿ. ಪಾಟೀಲರಿಗೆ ಟಿಕೆಟ್‌ ಪಕ್ಕಾ ಎಂಬ ಸಂಭ್ರಮ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಆದರೆ, ಮಾಜಿ ಶಾಸಕ ಯು.ಬಿ. ಬಣಕಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮಾತ್ರ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ತಮ್ಮ ನಾಯಕನಿಗೆ ಮುಂದಿನ
ಉಪ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸುವ ತಂತ್ರ ಇದಾಗಿದೆ ಎಂಬ ಅಸಮಾಧಾನ ಹೊರ ಹಾಕುತ್ತಿದ್ದಾರೆ.

Advertisement

ಯಾವುದೇ ಕಾರಣಕ್ಕೂ ನಿಗಮದ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಬಾರದೆಂದು ಕಾರ್ಯಕರ್ತರು ಯು.ಬಿ. ಬಣಕಾರ ಅವರ ಮೇಲೆ ಭಾರಿ ಒತ್ತಡ ಹೇರುತ್ತಿದ್ದಾರೆ. ಬದಲಾಗುವ ರಾಜಕೀಯ ಸ್ಥಿತ್ಯಂತರ ಏನೇ ಇದ್ದರೂ ಉಪ ಚುನಾವಣೆಯಲ್ಲಿ ಯು.ಬಿ. ಬಣಕಾರ ಸ್ಪರ್ಧೆಗಿಳಿಯಲೇ ಬೇಕು. ಯು.ಬಿ. ಬಣಕಾರ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಕೊಡಲೇಬೇಕು.

ಒಂದು ವೇಳೆ ಕೊಡದಿದ್ದರೆ ಪಕ್ಷೇತರವಾಗಿ ಆದರೂ ಸ್ಪರ್ಧಿಸಿ, ಗೆದ್ದು ಕ್ಷೇತ್ರದಲ್ಲಿ ಹಿಡಿತ ಸಾಧಿಸಬೇಕು. ಸರ್ಕಾರದ ಬೇರೆ ಯಾವುದೇ ಅಧಿಕಾರ ಆಮಿಷಕ್ಕೆ ಒಳಗಾಗಬಾರದೆಂದು ಕಾರ್ಯಕರ್ತರು ಈ ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದು, ಇದಕ್ಕಾಗಿ ಬೃಹತ್‌ ಪ್ರತಿಭಟನೆಯನ್ನೂ ಮಾಡಿ ತಮ್ಮ ಒತ್ತಡ ಬಹಿರಂಗಪಡಿಸಿದ್ದರು. ಈ ಒತ್ತಡ ನಡುವೆಯೂ ಸರ್ಕಾರ ಯು.ಬಿ. ಬಣಕಾರ ಅವರಿಗೆ ನಿಗಮದ ಅಧಿಕಾರ ನೀಡಿ ಸಮಾಧಾನ ಪಡಿಸಲು ಮುಂದಾಗಿರುವುದಕ್ಕೆ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಕೆಂಡ ಕಾರುತ್ತಿದ್ದಾರೆ.

ಒಟ್ಟಾರೆ ಅಧಿಕಾರ ಹಂಚಿಕೆಯೊಂದಿಗೆ ಎರಡು ಗುರಿ ಈಡೇರಿಸಿಕೊಳ್ಳುವ ಸರ್ಕಾರದ ಈ ನಿರ್ಧಾರ, ಹಿರೇಕೆರೂರು ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೋ, ಇಲ್ಲವೇ ವಿಫಲವಾಗುತ್ತೋ ಎಂಬುದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next