ಶಿಗ್ಗಾವಿ : ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ನರೇಗಾ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳ ಬೋಗಸ್ ಬಿಲ್ ಕುರಿತು ಸಾರ್ವಜನಿಕರಲ್ಲಿ ಮೂಡಿದ್ದ ಸಂಶಯ ಹಾಗೂ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಓಂಬುಡ್ಸ್‌ಮನ್ ಅವರ ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶ ವ್ಯಕ್ತವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಪ್ರಸಕ್ತ ಅವಧಿಯಲ್ಲಿ ಕಾಮಗಾರಿ ನಡೆಸದೇ ಬೋಗಸ್ ಬಿಲ್ ಪಡೆಯಲಾಗಿದ್ದು, ತನಿಖೆ ಮಾಡಿ ಸಂಬಂಧಿಸಿದವರ ಮೇಲೆ ಕ್ರಮ ವಹಿಸುವಂತೆ ಹೊಸೂರು ಗ್ರಾಮದ ಮಂಜುನಾಥ ಪಾಟೀಲ ಅವರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಜಿಪಂ ವ್ಯಾಪ್ತಿಯ ಓಂಬುಡ್ಸಮನ್ ಡಾ| ರಾಮಲಿಂಗಪ್ಪ ಸಿ. ಕಾಮತ ಹಾಗೂ ನಾಗರಾಜ ಅವರ ತಂಡ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿತು. ನಂತರ ತಾಪಂ ಸಹಾಯಕ ನಿರ್ದೇಶಕ ನೃಪತಿ ಬೂಸರೆಡ್ಡಿ, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ಅಭಿಯಂತರ ಮೃತ್ಯುಂಜಯ ಪಾಟೀಲ, ಎಂಜಿನಿಯರ್ ಕಮರನ್ ಹಾಗೂ ಪಿಡಿಒ ರಾಮಣ್ಣಾ ವಾಲಿಕಾರ, ಡಾಟಾ ಎಂಟ್ರಿ ಸಿಬ್ಬಂದಿ ಹಜರತ ಅಲಿ ಅವರೊಂದಿಗೆ ಸ್ಥಳ ಪರಿಶೀಲನೆಗಾಗಿ ಜೊಂಡಲಗಟ್ಟಿ ಹಾಗೂ ಬಸವನಕೊಪ್ಪ ಗ್ರಾಮಗಳ ಜಮೀನುಗಳಲ್ಲಿ ಕೈಗೊಂಡ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಕಾಮಗಾರಿ ನಡೆದ ಸ್ಥಳದಲ್ಲಿ ತಾಂತ್ರಿಕ ಜೀಯೋ ಟ್ಯಾಗ್ ಎಲ್ಲಿದೆ, ಕಾಮಗಾರಿ ನಡೆದ ಸ್ಥಳದಲ್ಲಿ ಕೆಲಸದ ಮಾಹಿತಿ ಫಲಕವನ್ನೇಕೆ ಅಳವಡಿಸಿಲ್ಲ ಎಂದು ಗ್ರಾಪಂ ಅಧಿ ಕಾರಿಗಳನ್ನು ಪ್ರಶ್ನಿಸಿದರು.
ದಾಖಲಾತಿಯಂತೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಕುರುಹುಗಳೇ ಲಭ್ಯವಾಗಿಲ್ಲ. ಹಾಗಾದರೆ ಕಾಮಗಾರಿ ನಡೆದ ಸ್ಥಳವಾದರೂ ಎಲ್ಲಿ ಎಂದು ಅಧಿಕಾರಿಗಳೇ ಕೆಲ ಹೊತ್ತು ತಬ್ಬಿಬ್ಟಾದರು. ಯತ್ನಳ್ಳಿ ಗ್ರಾಮದ ಚಿನ್ನಾಗಟ್ಟಿ ಕೆರೆಯಿಂದ ಬಳಗಟ್ಟಿ ಕೆರೆಯವರೆಗೆ ನೀರುಗಾಲುವೆ ನಿರ್ಮಾಣ ದಾಖಲೆಯಿದೆ. ಕಾಮಗಾರಿ ಕೂಲಿದಾತರ ಖಾತೆಗೆ ಹಣ ಹಾಕಲಾಗಿದೆ. ಆದರೆ, ಕಾಮಗಾರಿ ನಡೆದ ಕುರುಹುಗಳು ಕಾಣದ ಕಾರಣ ಅಧಿಕಾರಿಗಳು ದೂರುದಾರರಿಗೆ ಏನೂ ಉತ್ತರಿಸಲಾಗದೇ ಮೌನ ವಹಿಸಿದರು. ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತೇನೆ ಎಂದು ಡಾ|ರಾಮಲಿಂಗಪ್ಪ ಕಾಮತ್ ಸ್ಥಳದಿಂದ ವಾಪಸ್ಸಾದರು.
ಈ ವೇಳೆ ದೂರುದಾರ ಮಂಜುನಾಥಗೌಡ ಪಾಟೀಲ, ಅಧ್ಯಕ್ಷೆ ರಾಜೇಶ್ವರಿ ಲಮಾಣಿ, ಮಾಜಿ ಉಪಾಧ್ಯಕ್ಷೆ ಚನ್ನಮ್ಮಾ ಪಾಟೀಲ, ಸದಸ್ಯ ಸು ಧೀರ ಛಬ್ಬಿ, ಮಾಜಿ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಗ್ರಾಮಸ್ಥರಾದ ಶಂಕರಗೌಡ ಪಾಟೀಲ, ಸೋಮನಗೌಡ ಪಾಟೀಲ, ಸಾರ್ವಜನಿಕರು ಇದ್ದರು.
ಮಾಜಿ ಅಧ್ಯಕ್ಷ ಅಣ್ಣಪ್ಪ ಲಮಾಣಿ ಮಾತನಾಡಿ, ನಾವೇನು ಕೆಲಸಾ ಮಾಡೇವಿ. ಕೆಲಸಗಳು ಪೂರ್ಣ ಆಗಿಲ್ಲ. ಕೆಲ ಕೆಲಸಗಳ ಜಾಗೆಯಲ್ಲಿ ಮಳೆ ಬಂದು ಗುರುತು ಉಳಿದಿಲ್ಲ. ಸಾರ್ವಜನಿಕರ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತವಾಗಿವೆ. ಕಾಮಗಾರಿ ಮುಂದುವರೆಸಲಾಗುವುದು. ಕೆಲಸ ಮಾಡಿದಕ್ಕಷ್ಟೇ ಬಿಲ್ಲು ತೆಗೆದಿದ್ದೇವೆ. ಇಷ್ಟೊಂದು ಜನರು ಮಾಧ್ಯಮದವರು ಬಂದು ಸುದ್ದಿ ಬರೆಯಲು ಇಲ್ಲೇನು ಗ್ರಾಪಂನಲ್ಲಿ ಕೋಟಿ ಕೋಟಿ ದುಡ್ಡು ನಾವು ತಿಂದಿಲ್ಲ ಎಂದು ಮಾಧ್ಯಮದವರ ಮೇಲೆ ಏರು ಧ್ವನಿಯಲ್ಲಿ ಹರಿಹಾಯ್ದರು.
ಕಳೆದ ತಿಂಗಳು ದಿ. 7 ರಂದು ಮಾಹಿತಿ ಹಕ್ಕು ಮೂಲಕ ಗ್ರಾಪಂ ಕೈಗೊಂಡ ಹಲವಾರು ಕಾಮಗಾರಿಗಳ ಬಗ್ಗೆ ಸಂಶಯಗೊಂಡು ಗ್ರಾಮದ ಪದವೀಧರ ಯುವಕ ಪರ್ವತಗೌಡ ಪಾಟೀಲ ಪ್ರಶ್ನಿಸಿದ್ದರು. ಇದೇ ವಿಚಾರ ಪಂಚಾಯಿತಿಯಲ್ಲೇ ಪಿಡಿಒ ರಾಮಣ್ಣ ವಾಲಿಕಾರ ಹಾಗೂ ಮಾಹಿತಿ ಪ್ರಶ್ನಿಸಿದ ಪರ್ವತಗೌಡರ ಮಧ್ಯೆ ಗಲಾಟೆಗೆ ಕಾರಣವಾಗಿ ಅಟ್ರಾಸಿಟಿ ಕೇಸ್‌ನಿಂದ ಜೈಲುಪಾಲಾಗಿದ್ದರು.