Advertisement

ಹಿರೇಮಲ್ಲೂರು: ಭಾರೀ ಮಳೆಗೆ ಹಳ್ಳದ ನೀರು ಹರಿದು ಬೆಳೆ ಹಾನಿ

03:15 PM Oct 15, 2020 | sudhir |

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಭಾಗದಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದರಿಂದ ಹಿರೇಮಲ್ಲೂರು ಗ್ರಾಮದ ಜಮೀನೊಂದರಲ್ಲಿ ಹಳ್ಳದ ನೀರು ಹರಿದು ಸುಮಾರು ಮೂರು ಎಕರೆಯಲ್ಲಿ ಬೆಳೆದಿದ್ದ ಶೇಂಗಾ ಬೆಳೆ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಹಿರೇಮಲ್ಲೂರು ಗ್ರಾಮದ ಮಲ್ಲನಗೌಡ ಪಾಟೀಲ ಅವರ ಮೂರು ಎಕರೆ ಜಮೀನಿನಲ್ಲಿದ್ದ ಶೇಂಗಾ, ಬಳಲುಕೊಪ್ಪ ಗ್ರಾಮದ ಪ್ರಶಾಂತ ಮಹಾಬಲೇಶ್ವರಪ್ಪ ಕಜ್ಜಿಯವರ ಹೊಲದಲ್ಲಿದ್ದ ಶೇಂಗಾ ಕೊಚ್ಚಿ ಹೋಗಿದೆ. ಹತ್ತಿ ಹೊಲದಲ್ಲಿ ನೀರು ತುಂಬಿದ್ದು, ಹಾನಿ ಸಂಭವಿಸುವ ಆತಂಕ ರೈತರದ್ದಾಗಿದೆ.

Advertisement

ಹಿರೇಮಣಕಟ್ಟಿ ಗ್ರಾಮದ ಕೆ‌ರೆಯ ಏರಿ ಒಡೆದು ಸುತ್ತಮುಲ್ಲಿನ ಜಮೀನಿನಲ್ಲಿದ್ದ ಬೆಳೆಗಳಿಗೆ ಹಾನಿಯಾಗಿದೆ. ಉಳಿದಂತೆ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಹಾನಗಲ್ಲ, ಹಿರೇಕೆರೂರು ತಾಲೂಕಿನಲ್ಲಿ ಬೆಳಗ್ಗೆಯಿಂದ ಮೋಡಕವಿದ ವಾತಾವರಣ ಕಂಡು ಬಂದ್ದಿದ್ದು, ಮಧ್ಯಾಹ್ನ ಕೆಲಹೊತ್ತು ಸಾಧಾರಣ ಮಳೆ ಬಿದ್ದಿದೆ. ಬುಧವಾರ ದಿನವಿಡಿ ಮೋಡಕವಿದಿದ್ದರಿಂದ ತಂಪು
ವಾತಾವರಣ ನಿರ್ಮಾಣಗೊಂಡಿತ್ತು.

ಜಿಲ್ಲಾದ್ಯಂತ ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಕಟಾವು ಆರಂಭವಾಗಿದ್ದು, ಮಳೆಯಿಂದ ಬೆಳೆ ಒಣಗಿಸಲಾಗದೇ ರೈತರಿಗೆ ಸಮಸ್ಯೆಯಾಗುತ್ತಿದೆ. ಬಹುತೇಕ ಬೆಳೆ ಹೊಲದಲ್ಲೇ ಕಟಾವು ಮಾಡಿ ಇಟ್ಟಿರುವುದರಿಂದ ಮಳೆಗೆ ಸಿಲುಕಿ ಹಾನಿಯಾಗುತ್ತಿದೆ.

ಹಾವನೂರಲ್ಲಿ ನೆಲಕ್ಕೊರಗಿದ ಭತ್ತ
ಗುತ್ತಲ: ಗುತ್ತಲ ಹೋಬಳಿಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ನೆಲ ಕಚ್ಚಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸಮೀಪದ ಹಾವನೂರ ಗ್ರಾಮದ ರೈತ ದುರಗಪ್ಪ ಕೆಂಗನಿಂಗಪ್ಪನವರ ಎಂಬ ರೈತನ ಭತ್ತದ ಬೆಳೆ ಭಾರಿ ಮಳೆಗೆ ನೆಲಕಚ್ಚಿದೆ. ಬುಧವಾರ ಸುರಿದ ಮಳೆ ಮತ್ತು ಗಾಳಿಗೆ ಸುಮಾರು 3 ಎಕರೆ ಭತ್ತದ ಬೆಳೆಯಲ್ಲಿ ಎರಡು ಎಕರೆ ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಲಕ್ಷಕ್ಕೂ ಅಧಿಕ ಖರ್ಚು ಮಾಡಿದ ಭತ್ತದ ಬೆಳೆ ಕೈಗೆ ಸೇರುವ ಮುನ್ನ ನಾಶವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ರೀತಿ ಕಟಾವು ಹಂತದಲ್ಲಿರುವ ಶೇಂಗಾ, ಮೆಕ್ಕೆಜೋಳ ಮತ್ತು ಇನ್ನಿತರ ಬೆಳೆಗಳು ಜಮೀನಿನಲ್ಲೇ ನಾಶವಾಗುವ ಆತಂಕ ಎದುರಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ತಾವು ಖರ್ಚು ಮಾಡಿದ ಹಣವೂ ಬರುವುದಿಲ್ಲ ಎಂಬ ಆತಂಕದಲ್ಲಿದ್ದಾರೆ. ಅಲ್ಲದೇ
ಹಿಂಗಾರು ಬೆಳೆಯಾಗಿ ಜೋಳ, ಕಡಲೆಯನ್ನು ಬಿತ್ತಿದ ರೈತರು ನಿರಂತರವಾಗಿ ಮಳೆ ಸುರಿದರೆ ಬೀಜಗಳು ಕೊಳೆಯುವ
ಚಿಂತೆಯಲ್ಲಿದ್ದಾರೆ. ಒಟ್ಟಿನಲ್ಲಿ ನಿರಂತರ ಸುರಿಯುತ್ತಿರುವ ಮಳೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸಾಲ ಮಾಡಿ
ಹಾಕಿದಂತಾ ಶೇಂಗಾ ಬೆಳೆ ಕೈ ಸೇರುವ ಮುನ್ನವೇ ನಿರಂತರ ಮಳೆಗೆ ಕೀಳದಂತಾಗಿದೆ. ಹೊಲಗಳೆಲ್ಲ ಕೆಸರು ಗದ್ದೆಯಾಗಿವೆ.
ಭೂಮಿಯಲ್ಲಿಯೇ ಫಸಲು ಮೊಳಕೆಯೊಡೆಯುತ್ತಿದೆ. ಏನೂ ಮಾಡಬೇಕು ಎಂದು ದಿಕ್ಕು ತೋಚದಾಗಿದೆ ಎನ್ನುತ್ತಿದ್ದಾರೆ
ಶೇಂಗಾ ಬೆಳೆದ ರೈತರಾದ ನೀಲಪ್ಪ ಕಿತ್ತೂರ.

Advertisement

Udayavani is now on Telegram. Click here to join our channel and stay updated with the latest news.

Next