Advertisement

ಪ್ಲಾಸ್ಟಿಕ್ ಮುಕ್ತ ಹಾವೇರಿಗೆ ನಿರಂತರ ಯತ್ನ

05:29 PM Feb 04, 2021 | Team Udayavani |

ಹಾವೇರಿ: ಸ್ವತ್ಛತೆ ಮತ್ತು ವೈಜ್ಞಾನಿಕ ರೀತಿಯಲ್ಲಿ ಕಸ ಸಂಗ್ರಹ, ವಿಲೇವಾರಿ, ಮರು ಬಳಕೆ ಮಾಡುವ ನಿಟ್ಟಿನಲ್ಲಿ ನಗರ ಸ್ಥಳೀಯ  ಸಂಸ್ಥೆಗಳು ಆದ್ಯತೆ ನೀಡಿ ಹಾವೇರಿ ನಗರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಕರೆ ನೀಡಿದರು.

Advertisement

ಸ್ಥಳೀಯ ಹೊಸಮಠದ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ಹಾವೇರಿ ನಗರಸಭೆ ಸಹಯೋಗದಲ್ಲಿ ಹಾವೇರಿ ಮತ್ತು ಗುತ್ತಲ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಕುರಿತಂತೆ ಏರ್ಪಡಿಸಿದ್ದ ಸ್ವತ್ಛ ಹಾವೇರಿ-ಸ್ವಸ್ಥ ಹಾವೇರಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಸ ಸಂಗ್ರಹಿಸುವ ಹಂತದಲ್ಲೇ ವೈಜ್ಞಾನಿಕವಾಗಿ ಕಸ ವಿಂಗಡಿಸಬೇಕು. ಕಸದ ಮೂಲಗಳಿಂದಲೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವಂತೆ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಒಣ ಕಸದಿಂದ ಮರು ಬಳಕೆಗೆ ಉಪಯುಕ್ತವಾಗಿದ್ದರೆ ಅದನ್ನು ಮರುಬಳಕೆಗೆ ಬಳಸಬೇಕು. ಒಣ ಕಸವನ್ನು ಕಾಂಪೋಸ್ಟ್‌ ಮಾಡಿ ಗೊಬ್ಬರವಾಗಿಸಿ ಮಾರಾಟ  ಮಾಡುವುದರಿಂದ ಸ್ಥಳೀಯ ಸಂಸ್ಥೆಗಳು ಆದಾಯ ಗಳಿಸಬಹುದು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಚಿಂತನೆ ಮಾಡಬೇಕು  ಎಂದು ಸಲಹೆ ನೀಡಿದರು.

86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಈ ಹೊತ್ತಿನಲ್ಲಿ ಹಾವೇರಿ ನಗರ ಹೇಗಿರಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು. ನಗರವನ್ನು ಸ್ವತ್ಛ ಮತ್ತು ಸುಂದರವಾಗಿಸಲು ಪೌರಕಾರ್ಮಿಕರ ಹೊಣೆಗರಿಕೆ ಜೊತೆಗೆ ಸಾರ್ವಜನಿಕ ಹೊಣೆಗಾರಿಕೆಯೂ ಹೆಚ್ಚಿನದಾಗಿದೆ. ನಗರ ಸ್ವತ್ಛತೆಗೆ ಪೌರ ಕಾರ್ಮಿಕರೊಂದಿಗೆ ಸಹಕರಿಸಬೇಕು. ಪೌರಕಾರ್ಮಿಕರು ಕಸ  ಸಂಗ್ರಹಿಸಲು ಬಂದಾಗ ಮೂಲ ಹಂತದಲ್ಲೇ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡುವಂತೆ ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಸಂಜೀಕುಮಾರ ನೀರಲಗಿ ಮಾತನಾಡಿ, ಪೌರಕಾರ್ಮಿಕರು ನಗರದ ಆಧಾರಸ್ತಂಭಗಳು ಇದ್ದಂತೆ.  ಮಾಣಿಕತೆ, ನಿಷ್ಠೆಯಿಂದ ನನ್ನ ಹಾವೇರಿ, ನನ್ನೂರು, ನನ್ನದು ಎಂಬ ಮನೋಭಾವದಿಂದ ಪೌರಕಾರ್ಮಿಕರು ಕೆಲಸ ಮಾಡಬೇಕು. ಈ  ಮನೋಭಾವದಿಂದ ನಗರವನ್ನು ಸ್ವತ್ಛವಾಗಿರಿಸಲು ಸಾಧ್ಯವಾಗುತ್ತದೆ ಎಂದರು.

Advertisement

 ಇದನ್ನೂ ಓದಿ  : ಕನ್ನಡ ಭಾಷೆಯನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ: ಹೆಚ್ ಡಿಕೆ ಆಕ್ರೋಶ

ವೈಜ್ಞಾನಿಕವಾಗಿ ಕಸ ಸಂಗ್ರಹ, ವಿಲೇವಾರಿ ಕುರಿತಂತೆ ಪೌರಕಾರ್ಮಿಕರಿಗೆ ಹೆಚ್ಚಿನ ಮಾಹಿತಿ ನೀಡಲು ವಿದೇಶಿ ಪ್ರವಾಸದಂತಹ  ಕಾರ್ಯಕ್ರಮ ಆಯೋಜಿಸಿ ವಿದೇಶದ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ, ನಗರ ಸ್ವತ್ಛತೆ ಕುರಿತಂತೆ ಕಾರ್ಯಯೋಜನೆಗಳನ್ನು ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ಈ ಪ್ರವಾಸ ನಿಲ್ಲಿಸಲಾಗಿದೆ. ಪೌರಕಾರ್ಮಿಕರಿಗೆ ವಿದೇಶಿ ಪ್ರವಾಸ ಕಾರ್ಯಕ್ರಮ ರೂಪಿಸಿ ಬೇರೆ ಬೇರೆ ದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತಂತೆ ಪ್ರಾಯೋಗಿಕ ಮಾಹಿತಿ ಒದಗಿಸುವುದು ಅವಶ್ಯವಾಗಿದೆ ಎಂದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ದೇವಸ್ಥಾನದ ಸ್ವತ್ಛತೆಗೆ ಹೇಗೆ ಪೂಜಾರಿ ಕಾಳಜಿ ವಹಿಸುತ್ತಾರೋ  ಅದೇ ಮಾದರಿಯಲ್ಲಿ ಪೌರಕಾರ್ಮಿಕರು ನಗರದ ಸ್ವತ್ಛತೆಯ ಬಗ್ಗೆ ಕಾಳಜಿ ವಹಿಸಬೇಕು. ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಶ್ರಮ,  ಶಿಸ್ತು, ಸೇವಾ ಮನೋಭಾವದಿಂದ ಪೌರ ಕಾರ್ಮಿಕರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಕಾರ್ಯಾಗಾರದಲ್ಲಿ ಪೌರಕಾರ್ಮಿಕರಿಗೆ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆ, ನಾಗರಿಕರ ಜವಾಬ್ದಾರಿ, ಬಯೋ ಕಾಂಪೋಸ್ಟ್‌, ಸ್ವತ್ಛತಾ ಅಧಿನಿಯಮ ಕುರಿತಂತೆ ವಿವರವಾಗಿ ತರಬೇತಿ ನೀಡಿದರು. ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷೆ ಜಹೇದಬಾನು ಜಮಾದಾರ, ಗುತ್ತಲ ಪಪಂ ಅಧ್ಯಕ್ಷೆ ಹಸ್ಮತಬಿ ಮಹ್ಮದಲಿ ರಿತ್ತಿ, ಗುತ್ತಲ ಪಪಂ ಉಪಾಧ್ಯಕ್ಷೆ ಅನ್ನಪೂರ್ಣ ಶಿವಾನಂದ ಬಂಡಿವಡ್ಡರ, ಡಿವೈಎಸ್‌ಪಿ ವಿಜಯಕುಮಾರ ಸಂತೋಷ ಹಾಗೂ ಹಾವೇರಿ ನಗರಸಭೆ ಹಾಗೂ ಗುತ್ತಲ  ಪಟ್ಟಣ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳು, ಪೌರಕಾರ್ಮಿಕರು ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next