ನವದೆಹಲಿ: ನೀವು ಟ್ವಿಟ್ಟರ್ ಬಳಕೆದಾರರಾಗಿದ್ದು ನಿಮ್ಮ ಅಕೌಂಟ್ ಅನ್ನು ಬಹಳ ಸಮಯದಿಂದ ಬಳಸದೇ ಇದ್ದಿದ್ದರೆ ಇಂದೇ ಲಾಗಿನ್ ಆಗಿ ಇಲ್ಲದಿದ್ದರೇ ನಿಮ್ಮ ಅಕೌಂಟೇ ಡಿಲೀಟ್ ಆಗಿಬಿಡುವ ಸಾಧ್ಯತೆಗಳಿವೆ. ತನ್ನ ಬಳಕೆದಾರರು ತಮ್ಮ ಟ್ವಿಟ್ಟರ್ ಅಕೌಂಟ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಮೈಕ್ರೋಬ್ಲಾಗಿಂಗ್ ಸಂಸ್ಥೆ ಈ ವಿನೂತನ ಕ್ರಮವನ್ನು ಪ್ರಕಟಿಸಿದೆ.
ಹೌದು, ಆ್ಯಕ್ಟಿವ್ (ನಿಷ್ಕ್ರಿಯಗೊಂಡಿರುವ) ಇಲ್ಲದಿರುವ ಟ್ವಿಟ್ಟರ್ ಅಕೌಂಟ್ ಗಳನ್ನು ಡಿಲೀಟ್ ಮಾಡುವ ಮೂಲಕ ಟ್ವಿಟ್ಟರ್ ಸ್ವಚ್ಛತಾ ಅಭಿಯಾನಕ್ಕೆ ಈ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಮುಂದಾಗಿದೆ. ಈ ಸ್ವಚ್ಛತಾ ಅಭಿಯಾನದ ಹಿಂದೆ ನಕಲಿ ಟ್ವಿಟ್ಟರ್ ಖಾತೆಗಳನ್ನು ಡಿಲೀಟ್ ಮಾಡುವ ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಕಂಪೆನಿ ಹೊಂದಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ಸಮಯಗಳಿಂದ ಚಾಲ್ತಿಯಲ್ಲಿಲ್ಲದ ಟ್ವಿಟ್ಟರ್ ಲಾಗಿನ್ ಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಈ ಕುರಿತಾದ ಮಾಹಿತಿಯನ್ನು ಬಳಕೆದಾರರ ಅಧಿಕೃತ ಇ-ಮೇಲ್ ಅಕೌಂಟ್ ಗಳಿಗೆ ಕಳುಹಿಸಿದ ಬಳಿಕವಷ್ಟೇ ಟ್ವಿಟ್ಟರ್ ಸಂಸ್ಥೆಯು ಚಾಲ್ತಿಯಲ್ಲಿಲ್ಲದ ಅಕೌಂಟ್ ಗಳನ್ನು ಡಿಲೀಟ್ ಮಾಡುತ್ತಿದೆ.
ಹಾಗಾಗಿ ನೀವು ಟ್ಟಿಟ್ಟರ್ ಬಳಕೆದಾರರಾಗಿದ್ದಲ್ಲಿ ಮತ್ತು ಕಳೆದ ಕೆಲವು ಸಮಯಗಳಿಂದ ನಿಮ್ಮ ಅಕೌಂಟ್ ಗೆ ನೀವು ಲಾಗಿನ್ ಆಗಿರದೇ ಇದ್ದಲ್ಲಿ ಇದೇ ಡಿಸೆಂಬರ್ 11ರ ಒಳಗೆ ಲಾಗಿನ್ ಆಗುವ ಮೂಲಕ ನಿಮ್ಮ ಅಕೌಂಟ್ ಅನ್ನು ಉಳಿಸಿಕೊಳ್ಳುವ ಅವಕಾಶ ನಿಮಗಿದೆ. ಇಲ್ಲದಿದ್ದರೆ ನಿಮ್ಮ ಯೂಸರ್ ನೇಮ್ ಅನ್ನು ಹೊಸ ಬಳಕೆದಾರರಿಗೆ ನೀಡಲಾಗುವುದು ಎಂಬ ಸಂದೇಶವನ್ನು ಟ್ವಿಟ್ಟರ್ ತಾನು ಬಳಕೆದಾರರಿಗೆ ಕಳುಹಿಸುತ್ತಿರುವ ಇ-ಮೆಲ್ ನಲ್ಲಿ ನಮೂದಿಸಿದೆ.
ಹಾಗೆಂದು ನಿಷ್ಕ್ರಿಯ ಟ್ವಿಟ್ಟರ್ ಖಾತೆಗಳು ಏಕಾಏಕಿ ಡಿಲೀಟ್ ಆಗುವುದಿಲ್ಲ. ಡಿಸೆಂಬರ್ 11ರಿಂದ ಪ್ರಾರಂಭಗೊಳ್ಳುವ ಈ ಪ್ರಕ್ರಿಯೆ ಮುಂದಿನ ಕೆಲವು ತಿಂಗಳುಗಳವರೆಗೆ ಮುಂದುವರಿಯುವ ಸೂಚನೆಯನ್ನು ಸಂಸ್ಥೆ ನೀಡಿದೆ.