Advertisement
ಕೀಪ್ಯಾಡ್ ಮೊಬೈಲ್ ಬಳಕೆ ಕಾಲದಲ್ಲಿ ಅನಭಿಷಕ್ತ ದೊರೆಯಾಗಿದ್ದ ಫಿನ್‌ಲೆಂಡ್ ಮೂಲದ ನೋಕಿಯಾ ಕಂಪೆನಿ, ಅಂಡ್ರಾಯ್ಡ ಮೊಬೈಲ್‌ಗಳು ಬಂದಾಗ ತಾನೂ ಅದಕ್ಕೆ ಅಪ್‌ಡೇಟ್ ಆಗದೇ ವಿಂಡೋಸ್ ಮೊಬೈಲ್‌ಗಳನ್ನು ಅಪ್ಪಿಕೊಂಡಿತು. ಪರಿಣಾಮ, ಗ್ರಾಹಕರ ಕಣ್ಮಣಿಗಳಾದ ಅಂಡ್ರಾಯ್ಡ ಮೊಬೈಲ್‌ಗಳು ಅತ್ಯಂತ ಜನಪ್ರಿಯವಾದವು. ವಿಂಡೋಸ್ ಮೊಬೈಲ್‌ಗಳು ಮೂಲೆಗೆ ಸರಿದವು. ನಷ್ಟದಿಂದಾಗಿ ನೋಕಿಯಾ ಕಾರ್ಪೊರೇಷನ್ ತನ್ನ ಮೊಬೈಲ್ ವಿಭಾಗವನ್ನು ವಿಂಡೋಸ್‌ಗೆ ಮಾರಾಟ ಮಾಡಿತು. ವಿಂಡೋಸ್ ಕಂಪನಿಯಿಂದಲೂ ನೋಕಿಯಾ ಮೊಬೈಲ್ ವಿಭಾಗವನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಬಳಿಕ ವಿಂಡೋಸ್ ಮೊಬೈಲ್‌ಗಳ ಮಾರಾಟ ಸ್ಥಗಿತಗೊಂಡಿತು.
ನೋಕಿಯಾ ಬ್ರಾಂಡ್ ಹೆಸರನ್ನು ಬಳಸಿಕೊಂಡು ಅದರ ಮಾಜಿ ಉದ್ಯೋಗಿಗಳು ಎಚ್.ಎಮ್.ಡಿ ಗ್ಲೋಬಲ್ ಕಂಪನಿ ಸ್ಥಾಪಿಸಿ, ಪ್ರಸ್ತುತ ಅಂಡ್ರಾಯ್ಡ ಮೊಬೈಲ್‌ಗಳನ್ನು ಹೊರತರುತ್ತಿದ್ದಾರೆ. ಕಂಪನಿ ಆರಂಭಿಕ ಮತ್ತು ಮಧ್ಯಮ ವರ್ಗದ ರೇಂಜಿನಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅದು, ಇದೀಗ ಭಾರತದಲ್ಲಿ ಬಿಡುಗಡೆ ಮಾಡಿರುವ ನೂತನ ಫೋನ್ “ನೋಕಿಯಾ 2.3′. ಈ ಫೋನ್ ಡಿಸೆಂಬರ್ 27ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಇದು ಆರಂಭಿಕ ದರ್ಜೆಯ ಫೋನಾಗಿದ್ದು, ದರವನ್ನು 8,199 ರೂ. ನಿಗದಿಪಡಿಸಲಾಗಿದೆ. ಈ ಮೊಬೈಲನ್ನು ಆಫ್ಲೈನ್ ಮಾರಾಟಕ್ಕೆಂದೇ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಇದು ಸಂಗೀತಾ, ಪೂರ್ವಿಕಾ, ಕ್ರೋಮಾ, ರಿಲಯನ್ಸ್ ಮತ್ತಿತರ ಮಳಿಗೆಗಳಲ್ಲಿ ದೊರಕಲಿದೆ. ಆನ್‌ಲೈನ್ ಮಾರಾಟದ ಬಗ್ಗೆ ಕಂಪನಿ ಇನ್ನೂ ಮಾಹಿತಿ ನೀಡಿಲ್ಲ.
Related Articles
ಈ ಮೊಬೈಲ್ ಪರದೆ 6.2 ಇಂಚಿನದು. ಎಚ್.ಡಿ. ಪ್ಲಸ್ (720x 1520) ಐಪಿಎಸ್ ಡಿಸ್‌ಪ್ಲೇ ಹೊಂದಿದೆ. 2 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಮೆಮೊರಿ ಕಾರ್ಡ್ ಬಳಸುವ ಮೂಲಕ 512 ಜಿ.ಬಿ ತನಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು. ಇದರಲ್ಲಿರುವುದು ಮೀಡಿಯಾ ಟೆಕ್ ಹೀಲಿಯೋ ಎ22 ಪ್ರೊಸೆಸರ್. ಇದು ನಾಲ್ಕು ಕೋರ್‌ಗಳ ಪ್ರೊಸೆಸರ್ ಆಗಿದೆ! ಈ ಮೊಬೈಲ್ 4000 ಎಂ.ಎ.ಎಚ್ ಬ್ಯಾಟರಿ ಹೊಂದಿದೆ. 13 ಮತ್ತು 2 ಮೆಗಾಪಿಕ್ಸೆಲ್‌ಗಳ ಎರಡು ಲೆನ್ಸಿನ ಕ್ಯಾಮರಾವನ್ನು ಹಿಂಬದಿಯಲ್ಲಿ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಪಿಕ್ಸಲ್ ಕ್ಯಾಮರಾ ಇದೆ. ಈ ಮೊಬೈಲ್‌ನ ತೂಕ 183 ಗ್ರಾಂ. ಇದು ಪಾಲಿಮರ್(ಪ್ಲಾಸ್ಟಿಕ್)ನಿಂದ ಮಾಡಲ್ಪಟ್ಟಿದೆ.
Advertisement
ಮೌಲ್ಯಯುತವೇ?8,199 ರೂ.ಗಳಿಗೆ ಇದು ಹಣಕ್ಕೆ ತಕ್ಕ ಮೌಲ್ಯ ಒದಗಿಸುವುದೇ ಎಂಬುದನ್ನು ಪರಿಶೀಲಿಸಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಇದೇ ದರಕ್ಕೆ ಅನೇಕ ಕಂಪೆನಿಗಳು 4 ಜಿ.ಬಿ ರ್ಯಾಮ್ 64 ಜಿ.ಬಿ ಆಂತರಿಕ ಸಂಗ್ರಹ ಸಾಮರ್ಥ್ಯದ ಮೊಬೈಲ್‌ಗಳನ್ನು ನೀಡುತ್ತಿವೆ. ಅಲ್ಲದೆ, ನೋಕಿಯಾ 2.3ಯಲ್ಲಿ ಇರುವುದು 4 ಕೋರ್‌ಗಳ ಪ್ರೊಸೆಸರ್. ಈ ದರಕ್ಕೆ 8 ಕೋರ್‌ಗಳುಳ್ಳ ಪ್ರೊಸೆಸರ್‌ಗಳುಳ್ಳ ಫೋನ್‌ಗಳು ದೊರಕುತ್ತಿವೆ. ಮಾರುಕಟ್ಟೆಯಲ್ಲಿ ಮತ್ತೆ ಪುಟಿದೇಳಲು ಯತ್ನಿಸುತ್ತಿರುವ ನೋಕಿಯಾ, ಸ್ಪರ್ಧಾತ್ಮಕ ದರ ನಿಗದಿಪಡಿಸದೇ ಇದ್ದರೆ ಪೈಪೋಟಿಯಲ್ಲಿ ಗೆಲ್ಲುವುದು ಕಷ್ಟ. ಬಾಕ್ಸ್-
ಸೂಪರ್‌ಫಾಸ್ಟ್ ಅಪ್‌ಡೇಟ್
ಜೊತೆಗೆ ಇದು “ಅಂಡ್ರಾಯ್ಡ ಒನ್’ ಫೋನ್ ಕೂಡ ಆಗಿದೆ. ಅಂದರೆ, ಗೂಗಲ್‌ನ ಆಂಡ್ರಾಯ್ಡ ಅಪ್‌ಡೇಟ್‌ಗಳು ಬೇಗನೆ ದೊರಕುತ್ತವೆ. ಆಂಡ್ರಾಯ್ಡ 10 ಬಂದಿದ್ದರೂ, ಈ ಫೋನ್ “ಆಂಡ್ರಾಯ್ಡ 9 ಪೈ’ನಲ್ಲೇ ಇದೆ. ಕೆಲ ದಿನಗಳ ಬಳಿಕ ಆಂಡ್ರಾಯ್ಡ 10 ಅಪ್‌ಡೇಟ್ ನೀಡುವುದಾಗಿ ಕಂಪೆನಿ ತಿಳಿಸಿದೆ. 2020ರ ಮಾರ್ಚ್ 31ರೊಳಗೆ ಕೊಂಡರೆ, ಒಂದು ವರ್ಷದ ರಿಪ್ಲೇಸ್‌ಮೆಂಟ್ ಗ್ಯಾರೆಂಟಿ (ರಿಪೇರಿಗೆ ಬಂದರೆ ಹೊಸ ಫೋನ್- ಷರತ್ತುಗಳು ಅನ್ವಯ!) ನೀಡುವುದಾಗಿ ಕಂಪೆನಿ ತಿಳಿಸಿದೆ. ಪ್ಯೂರ್ ಅಂಡ್ರಾಯ್ಡ ಅನುಭವ
ಸಾಧಾರಣ, ನೋಕಿಯಾ ಮೊಬೈಲ್‌ಗಳು ಶುದ್ಧ (ಪ್ಯೂರ್) ಅಂಡ್ರಾಯ್ಡ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುತ್ತದೆ. ಹಾಗೆಯೇ ಈ ಮೊಬೈಲ್ ಸಹ ಶುದ್ಧ ಆಂಡ್ರಾಯ್ಡ ಹೊಂದಿದೆ. ಪ್ಯೂರ್ ಆಂಡ್ರಾಯ್ಡ ಎಂದರೆ, ಮೂಲ ಕಾರ್ಯಾಚರಣೆ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ). ಶಿಯೋಮಿ, ಒನ್‌ಪ್ಲಸ್, ಆನರ್, ರಿಯಲ್‌ಮಿ ಮುಂತಾದ ಕಂಪನಿಗಳು ಮೂಲ ಆಂಡ್ರಾಯ್ಡನಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ತನ್ನ ಗ್ರಾಹಕರಿಗೆ ನಾನಾ ಹೆಚ್ಚುವರಿ ಸವಲತ್ತನ್ನು ನೀಡುತ್ತವೆ. ಹೀಗಾಗಿಯೇ ಅವುಗಳ ನಡುವೆ ವ್ಯತ್ಯಾಸ ಕಂಡುಬರುವುದು. ನೋಕಿಯಾ ಯಾವುದೇ ಬದಲಾವಣೆಗಳನ್ನು ಮಾಡದೆ, ಮೂಲ ಅಂಡ್ರಾಯ್ಡ ಆಪರೇಟಿಂಗ್ ಸಿಸ್ಟಂಅನ್ನೇ ನೀಡುತ್ತಿದೆ. ಹಲವು ಬಳಕೆದಾರರು ಪ್ಯೂರ್ ಆಂಡ್ರಾಯ್ಡ ಎಕ್ಸ್‌ಪೀರಿಯೆನ್ಸ್‌ಅನ್ನು ಪಡೆಯಲು ಬಯಸುತ್ತಾರೆ. ಅವರಿಗೆ ಈ ಮೊಬೈಲ್ ಇಷ್ಟವಾಗಬಹುದು. ಇನ್ನು ಕೆಲವು ಬಳಕೆದಾರರಿಗೆ ಶಿಯೋಮಿಯ ಯುಐ, ಒನ್‌ಪ್ಲಸ್ ಯುಐ ಇಷ್ಟ. ಇದು ಅವರವರ ಅಭಿರುಚಿ, ಬಳಕೆಯನ್ನಾಧರಿಸಿದೆ. – ಕೆ.ಎಸ್. ಬನಶಂಕರ ಆರಾಧ್ಯ