ತಪ್ಪು ಮಾಡೋದು ಸಹಜ ಕಣೋ… ತಿದ್ದಿ ನಡೆಯೋನು ಮನುಜ ಕಣೋ ಎಂದು “ಮನೆದೇವ್ರು’ ಸಿನಿಮಾದಲ್ಲಿ ಹಂಸಲೇಖ ಬರೆದಿದ್ದರು. ಭೂಮಿ ಮೇಲಿನ ಅಂಥ ಮನುಜರಲ್ಲಿ ಒಬ್ಬ ಮಿಜೋರಾಂನ ಡೆರೆಕ್. ವಯಸ್ಸು ಬರೀ 6. ರಸ್ತೆ ಮೇಲೆ ಹಿಟ್ ಅಂಡ್ ರನ್ ಮಾಡುವವರು ಗಾಯಾಳುಗಳಿಗೆ ಸಹಾಯ ಮಾಡದೆ ಹಾಗೆಯೇ ಓಡಿಹೋಗುತ್ತಾರೆ. ಆದರೆ, ಓಡಿ ಹೋಗದೆ ಗಾಯಾಳುವಿನ ಜವಾಬ್ದಾರಿ ತೆಗೆದುಕೊಂಡಿದ್ದು ಡೆರೆಕ್‌ನ ಹೆಚ್ಚುಗಾರಿಕೆ. ಹಿಟ್ ಮಾಡಿದ ಮೇಲೆ ಆತ ನಡೆದುಕೊಂಡ ರೀತಿ ಇಂಟರ್‌ನೆಟ್ಟಿಗರ ಹುಚ್ಚೆಬ್ಬಿಸುತ್ತಿದೆ. 6ನೇ ವಯಸ್ಸಿಗೇ ಅದ್ಯಾವ ವಾಹನ ಚಾಲನೆ ಮಾಡುತ್ತಾನಪ್ಪ ಎಂದುಕೊಳ್ಳುತ್ತಿದ್ದೀರಾ. ಆತ ವಾಹನ ಚಾಲನೆ ಮಾಡುತ್ತಿರಲಿಲ್ಲ. ಮನೆ ಹತ್ತಿರ ಓಡಿ ಬರುತ್ತಿದ್ದಾಗ ಒಂದು ಕೋಳಿಮರಿಯ ಮೇಲೆ ಕಾಲಿಟ್ಟು ಬಿಟ್ಟಿದ್ದ. ಜೀವನದಲ್ಲಿ ಇರುವೆಗೂ ನೋವು ನೀಡದ ಡೆರೆಕ್‌ಗೆ ತನ್ನ ಕೃತ್ಯದಿಂದ ಅಳುಬಂತು. ಅಳುತ್ತಲೇ ಕೋಳಿ ಮರಿಯನ್ನೆತ್ತಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಬಂದವನೇ ವೈದ್ಯರ ಮುಂದೆ ತಾನು ಕಷ್ಟಪಟ್ಟು ಕೂಡಿಟ್ಟ ಹತ್ತು ರುಪಾಯಿಯನ್ನೇ ವೈದ್ಯರ ಮುಂದೆ ಹಿಡಿದು ಹೇಗಾದರೂ ಮಾಡಿ ಕೋಳಿಮರಿಯನ್ನು ಹುಷಾರು ಮಾಡಿ ಎಂದು ಅಲವತ್ತುಕೊಂಡಿದ್ದಾನೆ. ಆಗ ತೆಗೆದ ಫೋಟೋನೇ ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವುದು. ಈ ಹುಡುಗನ ಅಂತಃಕರಣಕ್ಕೆ ಒಂದು ಸಲಾಂ ಹೇಳ್ಳೋಣ, ಅಲ್ವಾ?