ಕಾನ್ಪುರ : ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೆಸರನ್ನು ಉಚ್ಚರಿಸಿದ ಮಾತ್ರಕ್ಕೆ ನಾನು ಮತ್ತೆ ಸ್ನಾನ ಮಾಡಬೇಕಾದೀತು ಎಂದು ಅತ್ಯಂತ ಪ್ರಖರ ದಾಳಿ ಮಾಡುವ ಮೂಲಕ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರು ವಿವಾದವನ್ನು ಸೃಷ್ಟಿಸಿದ್ದಾರೆ.
“ಅಜಂ ಖಾನ್ ಹೆಸರನ್ನು ಉಚ್ಚರಿಸಿದ ಮಾತ್ರಕ್ಕೆ ನಾನು ಸ್ನಾನ ಮಾಡಬೇಕಾದೀತು. ಉತ್ತರ ಪ್ರದೇಶ ಸರಕಾರ ಕೋಮು ನೆಲೆಯಲ್ಲಿ ಕೆಲಸ ಮಾಡುತ್ತದೆ ಮತ್ತು ಅಂತೆಯೇ ತಾರತಮ್ಯ ಎಸಗುತ್ತದೆ. ವೋಟ್ ಬ್ಯಾಂಕ್ ಸೃಷ್ಟಿಸಲು ಅದು ತುಷ್ಟೀಕರಣದ ರಾಜಕೀಯ ನಡೆಸುತ್ತಿದೆ; ಹಾಗಾಗಿಯೇ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯು ಅತ್ಯಂತ ಕಳಪೆಯಾಗಿದೆ’ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ಕಾನ್ಪುರದ ಸೀಸಾಮೌ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಹೇಳಿದರು.
“ಮಧ್ಯಪ್ರದೇಶದಲ್ಲಾದರೆ ಸರಕಾರವು ಎಲ್ಲರಿಗೂ ನ್ಯಾಯ ಎನ್ನುವ ತತ್ವದ ಮೇಲೆ ಕೆಲಸ ಮಾಡುತ್ತಿದೆ; ಅಲ್ಲಿ ನಾವು ಕೋಮು ನೆಲೆಯಲ್ಲಿ ಆಡಳಿತ ನಡೆಸುವುದಿಲ್ಲ; ಹಾಗಾಗಿ ತಾರತಮ್ಯ, ತುಷ್ಟೀಕರಣದ ಮಾತೇ ಇಲ್ಲ; ಒಟ್ಟಂದದಲ್ಲಿ ರಾಜ್ಯದಲ್ಲಿ ಕಾನೂನಿನ ಆಡಳಿತೆ ಇದೆ’ ಎಂದು ಚೌಹಾಣ್ ಹೇಳಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಚೌಹಾಣ್, ಹಾಗಾದಲ್ಲಿ ಉತ್ತರ ಪ್ರದೇಶವು ಬಿಜೆಪಿ ಸರಕಾರವಿರುವ ಇತರ ರಾಜ್ಯಗಳಂತೆ ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಲಿದೆ ಎಂದು ಹೇಳಿದರು.
ಕಾನ್ಪುರ ಒಂದು ಬೃಹತ್ ಕೈಗಾರಿಕಾ ನಗರಿಯಾದರೂ ಇಲ್ಲಿ ಈಗಲೂ ವಿಮಾನ ನಿಲ್ದಾಣ ಇಲ್ಲ; ಆದರೆ ಕೇವಲ ಒಂದು ಪಟ್ಟಣವಾಗಿರುವ ಹಾಗೂ ಅಖೀಲೇಶ್ ಯಾದವ್ ಅವರ ಪೂರ್ವಜರ ಊರಾಗಿರುವ ಸೈಪಾಯಿಗೆ ತನ್ನದೇ ಆದ ವಿಮಾನ ನಿಲ್ದಾಣವಿದೆ; ಸಮಾಜವಾದಿ ಪಕ್ಷ ತನ್ನ ಕುಟುಂಬದವರು ಮತ್ತು ತನ್ನ ಜಾತಿಯವರ ಕಲ್ಯಾಣಕ್ಕೆ ಆದ್ಯತೆ ನೀಡಿದೆಯೇ ಹೊರತು ಒಟ್ಟಾರೆ ಜನಕಲ್ಯಾಣಕ್ಕೆ ಆದ್ಯತೆ ನೀಡಿಲ್ಲ ಎಂದು ಚೌಹಾಣ್ ಟೀಕಿಸಿದರು.