ನವದೆಹಲಿ: 77ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಆಗಸ್ಟ್ 15) ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:Independence Day: ಸ್ವಾತಂತ್ರ್ಯ ದಿನಕ್ಕೆ ನೀವು ನೋಡಲೇಬೇಕಾದ 8 ಸಿನಿಮಾಗಳಿವು..
ಒಂದು ವೇಳೆ ನಮ್ಮ ಕನಸುಗಳು ಸಾಕಾರಗೊಳ್ಳಬೇಕಾದರೆ, ದೇಶದಲ್ಲಿರುವ ಮೂರು ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಬೇಕಾದ ಅಗತ್ಯವಿದೆ. ಭಾರತದಲ್ಲಿನ ಭ್ರಷ್ಟಾಚಾರ, ತುಷ್ಠೀಕರಣ ಮತ್ತು ಕುಟುಂಬ ರಾಜಕಾರಣದ ವಿರುದ್ಧ ನಿರಂತರವಾಗಿ ಹೋರಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಕಳೆದ 75 ವರ್ಷಗಳಿಂದ ನಮ್ಮ ವ್ಯವಸ್ಥೆಯಲ್ಲಿನ ಕೆಲವು ಸಮಸ್ಯೆಗಳು ಒಂದು ಭಾಗವಾಗಿಬಿಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಪ್ರಧಾನಿ ಮೋದಿ, ಕೆಲವು ರಾಜಕೀಯ ಪಕ್ಷಗಳು ವಂಶರಾಜಕಾರಣಕ್ಕೆ ಜೋತುಬಿದ್ದಿವೆ. ಈ ಪಕ್ಷಗಳು ಹೇಗಂದರೆ ಕುಟುಂಬಕ್ಕಾಗಿ, ಕುಟುಂಬದಿಂದ, ಕುಟುಂಬಕ್ಕೋಸ್ಕರ ರಾಜಕಾರಣ ಮಾಡುತ್ತಿವೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಚಾರಾಂದೋಲನ ನಡೆಸಬೇಕಾದ ಅಗತ್ಯವಿದೆ ಎಂದರು.
ತುಷ್ಠೀಕರಣದ ರಾಜಕಾರಣ ಸಾಮಾಜಿಕ ನ್ಯಾಯದ ಕೊಲೆ ಮಾಡಿದಂತೆ. ನಾನು ಬದುಕುವುದು, ಉಸಿರಾಡುತ್ತಿರುವುದು ಈ ದೇಶದ ಪ್ರಜೆಗಳಿಗಾಗಿ. ನಾನು ದೇಶದ ಜನರ ಪ್ರಗತಿಗಾಗಿ ಕನಸು ಕಾಣುತ್ತಿದ್ದೇನೆ. ನಾನು ನಿಮ್ಮನ್ನು ನನ್ನ ಕುಟುಂಬದ ಸದಸ್ಯರು ಎಂಬುದಾಗಿ ಪರಿಗಣಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.
100ನೇ ಸ್ವಾತಂತ್ರ್ಯೋತ್ಸವ ಆಚರಿಸುವ (2047ನೇ ಇಸವಿ) ವೇಳೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ನಮ್ಮ ದೇಶದ ಸಾಮರ್ಥ್ಯ ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ನಾನು ಈ ಭವಿಷ್ಯ ನುಡಿಯುತ್ತಿದ್ದೇನೆ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದ್ದಾರೆ.