ಮಳೆಗಾಲದಲ್ಲಿ ಆಹಾರ ಸೇವನೆಯ ಕುರಿತು ಜಾಗೃತಿ ಅತ್ಯಗತ್ಯ. ಹೊರಗಿನ ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತಿಂಡಿ ಬೇಕೆನಿಸಿದರೂ ಅವು ಆರೋಗ್ಯಕಾರಿಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ಬಾರದಂತೆ ಆರೋಗ್ಯಕರ ಆಹಾರ ಸೇವನೆಯನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಹಣ್ಣುಗಳ ಸೇವೆನೆಗೂ ಪ್ರಾಮುಖ್ಯತೆ ನೀಡಬೇಕು. ಮಳೆಗಾಲದಲ್ಲಿ ಸೇವಿಸುವ ಆಹಾರದಲ್ಲಿ ಈ ಹಣ್ಣುಗಳಿಗೆ ಜಾಗವಿರಲಿ·
ಚೆರ್ರಿ: ಮಳೆಗಾಲದಲ್ಲಿ ಚೆರ್ರಿ ಹಣ್ಣು ಹೇರಳವಾಗಿರುತ್ತದೆ. ಚೆರ್ರಿ ಹಣ್ಣು ಮಳೆಗಾಲದಲ್ಲಿ ತಿನ್ನಬಹುದಾದ ಹಣ್ಣಾಗಿದ್ದು, ಇದು ಕಡಿಮೆ ಕ್ಯಾಲರಿ ಹೊಂದಿದೆ. ಇದು ಯಥೇತ್ಛ ಪೌಷ್ಟಿಕಾಂಶ, ಜೀವಸತ್ವ ಗಳು ಮತ್ತು ಖನಿಜಾಂಶಗಳಿಂದ ಕೂಡಿದೆ. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಹಣ್ಣು ಇದಾಗಿದೆ.
ನೇರಳೆ ಹಣ್ಣು: ಹೆಚ್ಚು ವಿಟಮಿನ್, ಖನಿಜಾಂಶ ಹೊಂದಿರುವ ನೇರಳೆ ಹಣ್ಣು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಹಣ್ಣು. ಇದು ಕಿಡ್ನಿ ಮತ್ತು ಲಿವರ್‌ನ ಆರೋಗ್ಯಕ್ಕೆ ಉತ್ತಮ. ಇದರ ರಸವನ್ನು ನಿಯಮಿತವಾಗಿ ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು.
ಲೀಚಿ ಹಣ್ಣು: ವಿಟಮಿನ್ ಸಿ ಯನ್ನು ಹೊಂದಿರುವ ಈ ಹಣ್ಣು ರೋಗನಿರೋಧಕ ಶಕ್ತಿ ಹೊಂದಿದೆ. ಶೀತ, ನೆಗಡಿಯನ್ನು ತಡೆಯುವಲ್ಲಿ ಇದು ಸಹಾಯಕ ಹಾಗೂ ಚರ್ಮದ ಆರೋಗ್ಯಕ್ಕೆ ಈ ಹಣ್ಣಿನ ರಸ ಪ್ರಯೋಜನಕಾರಿ.
ಮಳೆಗಾಲದಲ್ಲಿ ಎಲ್ಲ ಹಣ್ಣುಗಳು ತಿನ್ನಲು ಸೂಕ್ತವಲ್ಲ. ಶೀತ, ಅನಾರೊಗ್ಯದ ಅಪಾಯ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ತಿನ್ನಬಹುದಾದ ಹಣ್ಣುಗಳನ್ನು ಮಾತ್ರ ಸೇವಿಸಬೇಕು.
ದಾಳಿಂಬೆ
ಸಮೃದ್ಧ ಪೋಷಕಾಂಶಗಳನ್ನು ಹೊಂದಿ ರುವ ದಾಳಿಂಬೆ ಮಳೆಗಾಲದಲ್ಲಿ ರೋಗ ಬಾರದಂತೆ ತಡೆಯಲು ಸಹಕಾರಿ ಯಾಗಿದೆ. ಕ್ಯಾನ್ಸರ್, ಹೃದ್ರೋಗದ ವಿರುದ್ಧ ಹೋರಾಡುತ್ತದೆ. ವಿಟಮಿನ್ ಬಿ ಯನ್ನು ಹೊಂದಿರುವ ಇದು ಕೆಂಪು ರಕ್ತ ಕಣಗಳನ್ನು ವೃದ್ಧಿಸುತ್ತದೆ.
ಪಪ್ಪಾಯಿ
ವಿಟಮಿನ್ ಸಿಯಿಂದ ಕೂಡಿರುವ ಈ ಹಣ್ಣು ಕಾಯಿಲೆಯ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಹೆಚ್ಚು ಪೈಬರ್ ಅಂಶವನ್ನು ಹೊಂದಿರುವ ಪಪ್ಪಾಯಿ ಜೀರ್ಣಕ್ರಿಯೆಗೆ ಸಹಾಯಕಾರಿ.
- ರಂಜಿನಿ ಮಿತ್ತಡ್ಕ