ಹೊಸದಿಲ್ಲಿ: ಜಮ್ಮುವಿನ ಸಂಜುವಾನ್ ಮಿಲಿಟರಿ ಕ್ಯಾಂಪ್ ಮೇಲೆ ಪಾಕ್ ಉಗ್ರರು ನಡೆಸಿರುವ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಸಹಿತ ಹಲವು ಆಯ್ಕೆಗಳು ಭಾರತೀಯ ಸೇನೆಯ ಮುಂದಿದೆ ಎಂಬ ಖಡಕ್ ಎಚ್ಚರಿಕೆಯನ್ನು ಸೇನಾ ಮುಖ್ಯಸ್ಥ ಜನರಲ್ ಬಿ ಪಿ ರಾವತ್ ಪಾಕಿಸ್ಥಾನಕ್ಕೆ ನೀಡಿದ್ದಾರೆ.
“ಪಾಕಿಸ್ಥಾನ ಭಾವಿಸಿಕೊಂಡಿದೆ – ತಾನೊಂದು ಸಮರವನ್ನು ಹೂಡುತ್ತಿದ್ದೇನೆ ಮತ್ತು ತನಗೆ ಅದರ ಲಾಭ ಸಿಗುತ್ತಿದೆ ಎಂದು; ಆದರೆ ಪಾಕಿಸ್ಥಾನ ತನ್ನ ಕೃತ್ಯಕ್ಕೆ ಬೆಲೆ ತೆರಲೇಬೇಕಾಗುತ್ತದೆ. ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಲು ನಮ್ಮ ಬಳಿ, ಸರ್ಜಿಕಲ್ ಸ್ಟ್ರೈಕ್ ಸಹಿತ, ಹಲವು ಆಯ್ಕೆಗಳಿವೆ; ಇಂದಲ್ಲ ಮುಂದೊಂದು ದಿನ, ಸರಿಯಾದ ಹೊತ್ತನ್ನು ಗೊತ್ತುಪಡಿಸಿಕೊಂಡು ನಾವು ಪಾಕ್ ಮೇಲೆ ದಾಳಿ ನಡೆಸುತ್ತೇವೆ’ ಎಂದು ಜನರಲ್ ರಾವತ್ ಹೇಳಿದರು.
ಕಳೆದ ಫೆ.10ರಂದು ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಉಗ್ರರು ಜಮ್ಮು ಪ್ರದೇಶದಲ್ಲಿರುವ ಸಂಜುವಾನ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಆರು ಮಂದಿ ಭಾರತೀಯ ಯೋಧರನ್ನು ಮತ್ತು ಓರ್ವ ಪೌರನನ್ನು ಕೊಂದಿದ್ದರಲ್ಲದೆ ಇತರ ಹತ್ತು ಮಂದಿಯನ್ನು ಗಾಯಗೊಳಿಸಿದ್ದರು.
ಜೆಇಎಂ ಉಗ್ರರ ಈ ದಾಳಿ ಪ್ರತಿದಾಳಿ ನಡೆಸಿದ ಭಾರತೀಯ ಯೋಧರು ನಾಲ್ವರು ಉಗ್ರರನ್ನು ಕೊಂದಿದ್ದರು.
ಈ ನಡುವೆ ಎಲ್‌ಓಸಿಯಲ್ಲಿನ ಪಾಕ್ ಕದನ ವಿರಾಮ ಉಲ್ಲಂಘನೆ ಹೆಚ್ಚುತ್ತಿದ್ದು ಭಾರತೀಯ ಸೇನೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಮತ್ತು ಪಾಕಿಗೆ ಅತ್ಯಂತ ವಿನಾಶಕಾರಿ ಉತ್ತರವನ್ನು ನೀಡುತ್ತಿದೆ ಎಂದು ಜನರಲ್ ರಾವತ್ ಹೇಳಿದರು.
ಪಾಕಿಸ್ಥಾನ ಭಾರತಕ್ಕೆ ತನ್ನ ಉಗ್ರರನ್ನು ಕಳುಹಿಸುವುದನ್ನು ನಿಲ್ಲಿಸಿದಾಗಲೇ ಭಾರತ ಗುಂಡಿನ ದಾಳಿ ನಿಲ್ಲಿಸುತ್ತದೆ ಎಂದು ಜನರಲ್ ರಾವತ್ ಹೇಳಿದರು.