Advertisement

ಕೋಟಿ ಹಣ ಇದ್ದರೂ ಕೆಲ್ಸ ಮಾತ್ರ ಆಗಿಲ್ಲ

12:40 PM Sep 14, 2019 | Team Udayavani |

ಶಿರಸಿ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಅನುಷ್ಠಾನಕ್ಕೆ ನೀಡಲಾಗಿದ್ದ 14ನೇ ಹಣಕಾಸು ಯೋಜನೆಯ 13 ಕೋ.ರೂ. ಅನುದಾನ ಬಾಕಿ ಉಳಿದಿದೆ.

Advertisement

ಕ್ರಿಯಾ ಯೋಜನೆ ಮೂಲಕ ಬಳಕೆಯಾಗದೇ ಬಾಕಿ ಉಳಿದಿದ್ದು ನಿರ್ಲಕ್ಷಿಸಿದರೆ ವಾಪಸ್ಸಾಗಲಿದೆ. ಇದಕ್ಕಾಗಿ ಡಿಸೆಂಬರ್‌ ಕೊನೆಯೊಳಗೆ ಕಾರ್ಯಾನುಷ್ಠಾನಕ್ಕೆ ತಾಪಂ ಎಲ್ಲ ಗ್ರಾಪಂಗಳಿಗೆ ಗುರಿ ನೀಡಿದೆ.

ತಾಪಂ ಇಒ ತಾಲೂಕಿನ 32 ಗ್ರಾಪಂಗಳ ಪಿಡಿಒಗಳಿಗೆ ಆದೇಶಿಸಿದ್ದು, 2020 ಮಾ.31ಕ್ಕೆ ಈ 14ನೇ ಹಣಕಾಸು ಯೋಜನೆ ಪೂರ್ಣವಾಗಲಿದೆ. ಈ ಕಾರಣದಿಂದ ಉಳಿದ 13,40,18,882 ರೂ.ವನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆ ಎಂದೂ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಅನುದಾನ ಅಪವ್ಯಯ ಆಗಬಾರದು ಎಂದೂ ಆದೇಶಿಸಿದ್ದಾರೆ.

ಸಣ್ಣ ಮೊತ್ತವಲ್ಲ!: 2015-16ರಲ್ಲಿ 1.03 ಕೋ.ರೂ., 17-17ಕ್ಕೆ 1.73 ಕೋ.ರೂ, 17-18ರಲ್ಲಿ 4.82 ಕೋ.ರೂ. 18-19ರಲ್ಲಿ 5.82 ಒಟೂ 13.40 ಕೋ.ರೂ. ಉಳಿದಿದೆ. ಒಮ್ಮೆ ಗ್ರಾಪಂ ಹಂತದಲ್ಲಿ ವಿಳಂಬವಾದಲ್ಲಿ ಆಯಾ ಪಂಚಾಯ್ತಿ ಮುಖ್ಯ ಅಧಿಕಾರಿಗಳೇ ಹೊಣೆ.

ಸೋಂದಾ ಹೊಸ ಪಂಚಾಯ್ತಿಯಲ್ಲಿ ಗರಿಷ್ಠ 2 ಕೋ.ರೂ. ಉಳಿಸಿಕೊಂಡರೆ ಇಟಗುಳಿ ಅತ್ಯಂತ ಕಡಿಮೆ 13 ಲ.ರೂ. ಕಾಮಗಾರಿ ಮಾಡಬೇಕಿದೆ.

Advertisement

ಎಲ್ಲೆಲ್ಲಿ ಎಷ್ಟೆಷ್ಟು?: ತಾಲೂಕಿನ ಅಂಡಗಿಯಲ್ಲಿ 29.82 ಲ.ರೂ., ಬದನಗೋಡ 72.66 ಲ.ರೂ., ಬನವಾಸಿ 45.63 ಲ.ರೂ. ಬಂಡಲ 27.35 ಲ.ರೂ., ಬಂಕನಾಳ 26.93 ಲ.ರೂ., ಭೈರುಂಬೆ 46.24 ಲ.ರೂ., ಭಾಶಿ 30.13 ಲ.ರೂ., ಬಿಸಲಕೊಪ್ಪ 64.03 ಲ.ರೂ., ದೇವಣಲಿ 81.21 ಲ.ರೂ., ದೊಡ್ನಳ್ಳಿ 45.65 ಲ.ರೂ., ಗುಡ್ನಾಪುರ 29.19 ಲ.ರೂ., ಹುಲೇಕಲ್ 28.14 ಲ.ರೂ., ಹುಣಸೆಕೊಪ್ಪ 30.77 ಲ.ರೂ., ಹುತಗಾರ 2019 ಲ.ರೂ., ಇಟಗುಳಿ 13.14ಲ.ರೂ., ಜಾನ್ಮನೆ 28.87 ಲ.ರೂ., ಜಾನ್ಮನೆ 28.87 ಲ.ರೂ., ಕೋಡ್ನಗದ್ದೆ 30.73 ಲ.ರೂ., ಕುಳವೆ 31.47 ಲ.ರೂ., ನೆಗ್ಗು 46.56 ಲ.ರೂ., ಸಾಲಕಣಿ 29.04, ಶಿವಳ್ಳಿ 36.09 ಲ.ರೂ., ಸುಗಾವಿ 16.84 ಲ.ರೂ., ಉಂಚಳ್ಳಿ 37.48 ಲ.ರೂ., ವಾನಳ್ಳಿ 39.2 ಲ.ರೂ., ಯಡಹಳ್ಳಿ 37.28 ಲ.ರೂ. ಉಳಿಸಿಕೊಂಡಿದೆ.

ಹೊಸ ಪಂಚಾಯ್ತಿಗಳಾದ ಸದಾಶಿವಳ್ಳಿ 27.30 ಲ.ರೂ., ಸೋಂದಾ 2.20 ಕೋ.ರೂ. ಮೇಲಿನ ಓಣಿಕೇರಿ 37.93ಲ.ರೂ., ಮಂಜುಗುಣಿ 35.81 ಲ.ರೂ., ಹಲಗದ್ದೆ 23.58 ಲ.ರೂ. ಬಾಕಿ ಉಳಿಸಿಕೊಂಡಿದೆ. ಶಿರಸಿ ತಾಲೂಕಿಗೆ ಇಬ್ಬರು ಶಾಸಕರಿದ್ದರು. ಸಂಸದರ ಪ್ರಧಾನ ಕಚೇರಿ ಕೂಡ ಇಲ್ಲೇ ಇದೆ. ಈಗ ವಿಧಾನ ಸಭಾಧ್ಯಕ್ಷರೂ ಇದ್ದಾರೆ. ನಾಲ್ವರು ಜಿಪಂ 11 ತಾಪಂ ಸದಸ್ಯರೂ ಇದ್ದಾರೆ. ಅವರೆಲ್ಲರ ಚಾಟಿ ಏಟೂ ಕಾಮಗಾರಿ ವೇಗಕ್ಕೆ ಬೀಳಬೇಕಿದೆ.

ಸಮನ್ವಯದ ಕೊರತೆ: ಪಂಚಾಯ್ತಿಗಳು ಇನ್ನಷ್ಟು ಕ್ರಿಯಾಶೀಲ ಆಗಬೇಕು. ಆಗಿಲ್ಲ. ಇದಕ್ಕೆ ಕಾರಣ ಎಂಬುದು ನೋಡಬೇಕಿದೆ. ಕೋಟಿ ಕೋಟಿ ರೂ. ಬಾಕಿ ಯಾಕೆ? ಗ್ರಾಪಂಗಳಲ್ಲಿ ಹಿತಾಸಕ್ತಿ ಕೊರತೆ ಕಾರಣವೇ ಎಂಬುದು ಗೊತ್ತಿಲ್ಲ. ಇದರ ಜೊತೆಗೆ ಅನೇಕ ಯೋಜನೆಗಳೂ ಪಂಚಾಯ್ತಿಗಳಿಗೆ ಲಿಂಕ್‌ ಆಗಿದ್ದರಿಂದ ಅನೇಕ ಸರ್ವೇ ಕಾರ್ಯಗಳಿಗೆ ಹೆಚ್ಚೆಚ್ಚು ಬಳಸಿಕೊಳ್ಳುವುದರಿಂದ ಸಮಸ್ಯೆ ಆಗಿರಬಹುದು ಎನ್ನಲಾಗಿದೆ.

ಆದರೆ, ಇನ್ನಿರುವ ಮೂರುವರೆ ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಬಹುತೇಕ ಪೂರ್ಣ ಮಾಡದೇ ಹೋದರೆ ತಾಲೂಕಿನಿಂದ ಅನುದಾನ ವಾಪಸ್‌ ಹೋಗಲಿದೆ. ಕರ್ನಾಟಕ ವಿಧಾನ ಸಭಾಧ್ಯಕ್ಷರ ಕ್ಷೇತ್ರದಿಂದಲೂ ಹಣ ವಾಪಸ್‌ ಎಂಬ ಆಕ್ಷೇಪ ಕೂಡ ಬರಲಿದೆ. ಹೀಗಾಗಿ ಪದೇಪದೇ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರೂ ಅಧಿಕಾರಿಗಳು ಮೀನ ಮೇಷ ಮಾಡಿದರೆ ಅಧಿಕಾರಿಗಳ ತಲೆದಂಡ ತಪ್ಪಿದ್ದಲ್ಲ ಎಂಬ ಮಾತುಗಳೂ ಕೇಳಿ ಬಂದಿದೆ.

 

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next