ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಬೆಕ್ಕು ಮತ್ತು ಆಮೆಯೊಂದು ಓಡುವ ಸ್ಪರ್ಧೆಯ ವಿಡಿಯೋ ಗಮನಿಸಿದೆ. ಆ ವಿಡಿಯೋ ನೋಡಿದ ತತ್‌ಕ್ಷಣವೇ ನನ್ನ ಹುಬ್ಬೇರಿತು. ನಿಧಾನಗತಿಯಾಗಿ ನಿಮಿಷಕ್ಕೆ ಒಂದು ಹೆಜ್ಜೆ ಇಡುವ ಆಮೆ, ಚಿಟಪಟವೆಂದು ಓಡಾಡುವ ಬೆಕ್ಕಿನ ಜತೆ ರನ್ನಿಂಗ್ ರೇಸ್? ಎಂಬ ಪ್ರಶ್ನಾತ್ಮಕ ಭಾವನೆಯಿಂದಲೇ, ನಾನು ನೋ, ನೆವರ್! ಇದು ಅಸಾಧ್ಯ ಎಂದು ಬೆಕ್ಕು ಗೆದ್ದೇ ಗೆಲ್ಲುತ್ತದೆ ಎಂಬ ಆಶಾಭಾವದಿಂದಲೇ ವಿಡಿಯೋ ನೋಡಲು ಕುಳಿತೆ. ಆದರೆ ಅಲ್ಲಿ ಆದದ್ದೇ ಬೇರೆ.
ಆ ರನ್ನಿಂಗ್ ರೇಸ್‌ನಲ್ಲಿ ಆಮೆ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಲೇ ಫಾಲೋ ಆನ್ ಲೈನ್‌ನ್ನು ತಲುಪಿ ಬಿಟ್ಟಿತ್ತು. ಆದರೆ ಬೆಕ್ಕು, ಅಕ್ಕಪಕ್ಕದಲ್ಲಿರುವ ಪ್ರೇಕ್ಷಕರು ಚೀರಾಟವನ್ನು ನೋಡಿ ಹೆದರಿ ಕುಳಿತು ಬಿಟ್ಟಿತ್ತು. ಇದೇ ಸಮಯ ಸದುಪಯೋಗಪಡಿಸಿಕೊಂಡ ಆಮೆ ತನ್ನ ದಾರಿಯನ್ನು ಸುಲಭವಾಗಿ ತಲುಪಿ, ವಿಜಯದ ಕಿರೀಟ ತನ್ನದಾಗಿಸಿಕೊಂಡಿತ್ತು. ಇದು ಆ ವಿಡಿಯೋದ ಸಂಕ್ಷಿಪ್ತ ಕಾಮೆಂಟರಿ.
ಆದರೆ ಆ ಒಂದು ವಿಡಿಯೋದ ಘಟನೆ ನಮ್ಮ ಜೀವನದಲ್ಲಿ ಹಲವಾರು ಆಯಾಮಗಳ ಮೂಲಕ ನಮಗೆ ಇಷ್ಟವಾಗಬಹುದು ಹಾಗೇ ಸ್ಪೂರ್ತಿ ಆಗಬಹುದು, ಅಲ್ಲದೇ ಬದುಕಿಗೆ ಒಂದು ಪಾಠವೂ ಆಗಬಹುದು. ನೀವು ಆಮೆಯನ್ನು ತೆಗದುಕೊಳ್ಳಿ, ಅದು ನನ್ನಿಂದ ಓಡುವುದು ಆಗುವುದಿಲ್ಲ ಎಂದು ಸ್ಪರ್ಧೆಗಿಂತ ಮೊದಲೇ ಸೋತು ಕುಳಿತಿದ್ದರೆ ಹೇಗಿರುತ್ತಿತ್ತು? ವಿಜಯದ ಕಿರೀಟ ಅದಕ್ಕೆ ಒಲಿಯುತ್ತಿರಲಿಲ್ಲ. ಅದರಂತೆ ನಮ್ಮ ಜೀವನದಲ್ಲಿ ಕೂಡ ಸ್ಪರ್ಧೆಗಿಂತ ಮೊದಲೇ ಸೋಲು ಒಪ್ಪಿಕೊಳ್ಳುವುದು ತರವಲ್ಲ. ಏಕೆಂದರೆ. ಸ್ಪರ್ಧಿ ಎಷ್ಟೇ ಬಲಿಷ್ಠವಾಗಿದ್ದರೂ, ನಮ್ಮಲ್ಲಿ ಕೂಡ ಒಂದು ಅದಮ್ಯ ಶಕ್ತಿ ಇದ್ದೇ ಇರುತ್ತದೆ. ಇದಕ್ಕೆ ನಮಗೆ ಆಮೆ ಸ್ಫೂರ್ತಿಯಾಗಲಿ.
ಇನ್ನು ಬೆಕ್ಕಿನ ನಡೆ ನಮಗೆ ಬೇಜಾರು ತರಬಹುದು. ಅದೊಂದು ಜೀವನಕ್ಕೆ ಪಾಠವಾಗುತ್ತದೆ. ಬೆಕ್ಕು ತನ್ನ ಸ್ಪರ್ಧಿಯೂ ಅಲ್ಲದ ಆಮೆಯೊಂದಿಗೆ ಸೋತಿದೆ ಎಂದರೆ ಊಹಿಸಲು ಕೂಡ ಅಸಾಧ್ಯವಾದ ಮಾತು. ಸ್ಫರ್ಧೆಗಿಳಿದಾಗ ಬೆಕ್ಕು ವೇಗವಾಗಿ ಓಡಬಹುದಿತ್ತು. ಆದರೆ ಅದು ಮಾಡಿದ್ದೇನು, ಪ್ರೇಕ್ಷಕರ ಚೀರಾಟ, ಕೂಗಾಟ ನೋಡುತ್ತಾ ಕುಳಿತು ಬಿಟ್ಟಿತ್ತು. ತನ್ನ ಸದವಕಾಶವನ್ನು ತಪ್ಪಿಸಿಕೊಂಡುಬಿಟ್ಟಿತು. ಈ ಬೆಕ್ಕಿನಂತೆ ನಾವು ಕೂಡ ಜೀವನದಲ್ಲಿ ಆಗುವ ಎಷ್ಟೋ ಘಟನೆಗಳ ಮೆಲುಕು ಹಾಕಬಹುದು. ನಾವು ಏನೋ ಮಾಡಲು ಹೊರಟರೇ, ಬೇರೆಯವರೂ ಹೇಳುವ ಕುಹುಕ ಮಾತುಗಳು, ನಮ್ಮನ್ನು ಅಧೀರರನ್ನಾಗಿಸಿ ಬಿಡುತ್ತವೆ. ಇದ್ದ ಉತ್ಸಾಹ ಕೂಡ ಕಡಿಮೆ ಮಾಡಿಬಿಡುತ್ತವೆ. ಅದಕ್ಕೆ ಬೆಕ್ಕು ತನ್ನ ಕೆಲಸವನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದಿದ್ದರೆ ಯಶಸ್ಸು ಸಾಧಿಸುತ್ತಿತ್ತು. ಆದರೆ ಅದೊಂದು ದುರಂತ ಕಥೆಗೆ ನಾಂದಿ ಹಾಡಿತು.
ನಮ್ಮ ಜೀವನದಲ್ಲಿ ಕೂಡ ಮೊದಲು ಸ್ಪಷ್ಟ ಗುರಿಯೊಂದಿಗೆ, ದೃಢ ನಿರ್ಧಾರದಿಂದ ಮುನ್ನಡೆದರೆ, ಎಂತಹ ಸವಾಲು, ಬಲಿಷ್ಠ ಸ್ಫರ್ಧಿಯೂ ಇದ್ದರೂ ಕೂಡ ಜಯ ನಮ್ಮದಾಗುತ್ತದೆ.
ಶಿವ ಸ್ಥಾವರಮಠ