ಬೆಳಗಾವಿ: ಮುಂಗಾರು ಹಂಗಾಮಿಗೆ ರಿಯಾಯತಿ ಅಡಿಯಲ್ಲಿ ಬಿತ್ತನೆ ಬೀಜ ಮತ್ತು ಕೃಷಿ ಪರಿಕರ ವಿತರಿಸಲು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ .
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಭತ್ತ, ಸೋಯಾಬೀನ್, ಗೋವಿನ ಜೋಳ ಹಾಗೂ ಇತರೆ ಅವಶ್ಯಕ ಬೀಜ, ಕೃಷಿ ಪರಿಕರ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿವಿಧ ರೈತ ಸಂಪರ್ಕ ಕೇಂದ್ರದ ಮೂಲಕ ಅಲ್ಲದೆ ಹೆಚ್ಚುವರಿಯಾಗಿ ಪಿ.ಕೆ.ಪಿ.ಎಸ್ ಸಂಘದ ಮೂಲಕ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರೈತರು ತಮ್ಮ ಅವಶ್ಯಕ ದಾಖಲೆಗಳನ್ನು ಒದಗಿಸಿ ಬೀಜ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮೇ ಅಂತ್ಯಕ್ಕೆ ಬಿತ್ತನೆ ಪ್ರಾರಂಭವಾಗುತ್ತಿದ್ದು ಅದಕ್ಕೆ ಪೂರಕವಾಗಿ ಭತ್ತ, ಸೋಯಾಬೀನ, ಕಬ್ಬು, ಗೋವಿನ ಜೋಳ ಮೊದಲಾದ ಬೀಜಗಳ ದಾಸ್ತಾನು ಪ್ರಾರಂಭಿಸಲಾಗಿದೆ. ರೈತರು ತಾವು ಬಿತ್ತುವ ಪೂರ್ವ ತಮ್ಮ ಹಂತದಲ್ಲಿ ಮೊಳಕೆ ಪ್ರಮಾಣ ಪರೀಕ್ಷಿಸಿ ಬಿತ್ತನೆ ಕೈಗೊಳ್ಳಲು ಕೃಷಿ ಇಲಾಖೆಯು ಈಗಾಗಲೇ ರೈತರಿಗೆ ಸೂಚನೆ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಉತ್ತಮ ಗುಣಮಟ್ಟದ ಬೀಜದ ಜೊತೆಗೆ ಸಹಕಾರಿ ಸಂಘಗಳು ಹಾಗೂ ಖಾಸಗಿ ಮಾರಾಟಗಾರರ ಮೂಲಕ ರಸಗೊಬ್ಬರ ವ್ಯವಸ್ಥೆ ಮಾಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಮುಂಜಾಗ್ರತೆ ವಹಿಸಲು ಮನವಿ: ಮುಂಗಾರು ಹಂಗಾಮಿನ ಸಿದ್ಧತಾ ಕಾರ್ಯಗಳು ಪ್ರಾರಂಭವಾಗಿದ್ದು, ರೈತರು ಕೃಷಿ ಪರಿಕರ, ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸುವಾಗ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಕೃಷಿ ಪರಿಕರಗಳನ್ನು ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ ರಸೀದಿ ಪಡೆಯಬೇಕು. ಹಾಗೂ ರಸೀದಿಗಳಲ್ಲಿ ಲಾಟ್/ಬ್ಯಾಚ್ ನಂಬರ ಮತ್ತು ರೈತರ ಸಹಿ ಹಾಗೂ ಮಾರಾಟಗಾರರ ಸಹಿ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪಡೆದ ರಸೀದಿಗಳು, ಬೀಜದ ಚೀಲ, ಸ್ವಲ್ಪ ಬೀಜಗಳನ್ನು ಬೆಳೆ ಕಟಾವಿನವರೆಗೆ ಸುರಕ್ಷಿತವಾಗಿ ಕಾಯ್ದಿರಿಸಬೇಕು. ಬೀಜದ ಚೀಲದ ಮೇಲೆ ನಮೂದಿಸಿದ ಉತ್ಪಾದನಾ ದಿನಾಂಕ ಮತ್ತು ಅವದಿ ಮೀರುವ ದಿನಾಂಕಗಳನ್ನು ಗಮನಿಸಬೇಕು. ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಯಾವುದೇ ಭಾಗದಲ್ಲಿ ಕೃಷಿ ಪರಿಕರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ, ಸಂಬಂಧಪಟ್ಟ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕು. ಇದಲ್ಲದೆ ಜಾರಿದಳದ ಸಹಾಯಕ ಕೃಷಿ ನಿರ್ದೇಶಕರಾದ ಆರ್.ಬಿ.ಪಾಟೀಲ ಮೊ.ಸಂಖ್ಯೆ.:-8277930142, ಆರ್.ಬಿ.ನಾಯ್ಕರ ಮೊ. ಸಂಖ್ಯೆ.:-8277934161 ಹಾಗೂ ಸಹಾಯಕ ಕೃಷಿ ನಿರ್ದೇಶಕ ಸಿ.ಆಯ್.ಹೂಗಾರ ಮೊ.ಸಂಖ್ಯೆ.: 8277934049 ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.