ಟೊರಾಂಟೋ: ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಕೋವಿಡ್ ಸೋಂಕಿನ ಸಾಮಾನ್ಯ ಲಕ್ಷಣಗಳಾದರೂ, ಇವುಗಳ ಜತೆಗೆ, ನಸುಗೆಂಪು ಬಣ್ಣದ ಕಣ್ಣು ಕೂಡಾ ಕೋವಿಡ್ ಸೋಂಕಿನ ಲಕ್ಷಣವಾಗಿರುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಕೆನಡಾದ ನಿಯತಕಾಲಿಕ ‘ಆಪ್ತಮಾಲಜಿ’ಯಲ್ಲಿ ಈ ಕುರಿತಾದ ಅಧ್ಯಯನ ವರದಿಯೊಂದು ಪ್ರಕಟವಾಗಿದೆ.
ಕೆಂಗಣ್ಣು ಬೇನೆ, ಕಣ್ಣಿನ ಉರಿಯೂತಗಳೂ ಸೋಂಕಿನ ಆರಂಭಿಕ ಲಕ್ಷಣಗಳಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮಾ.29ರಂದು ಆಲ್ಬರ್ಟಾದ ರಾಯಲ್ ಅಲೆಕ್ಸಾಂಡ್ರಾ ಕಣ್ಣಿನ ಆಸ್ಪತ್ರೆಗೆ 29 ವರ್ಷದ ಮಹಿಳೆ ಆಗಮಿಸಿದ್ದಳು. ಅವಳಿಗೆ ಕೆಂಗಣ್ಣು ಬೇನೆ ಬಂದಿತ್ತು. ಜತೆಗೆ, ಸ್ವಲ್ಪಮಟ್ಟಿಗೆ ಉಸಿರಾಟದ ತೊಂದರೆ ಕೂಡಾ ಇತ್ತು. ಚಿಕಿತ್ಸೆ ಬಳಿಕ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಬಳಿಕ, ಪರೀಕ್ಷೆ ಮಾಡಿದಾಗ ಆಕೆಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಆದರೆ, ಆಕೆಗೆ ರೋಗ ಲಕ್ಷಣಗಳಾದ ಜ್ವರ ಅಥವಾ ಕೆಮ್ಮು ಇರಲಿಲ್ಲ. ಹೀಗಾಗಿ, ಕೆಂಗಣ್ಣು ಬೇನೆ ಮತ್ತು ಕಣ್ಣಿನ ಉರಿಯೂತಗಳಿದ್ದರೆ ಅವರಿಗೆ ಕೊರೊನಾ ಪರೀಕ್ಷೆ ನಡೆಸುವುದು ಒಳ್ಳೆಯದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.