Advertisement

ಹವಾಮಾನಕ್ಕೆ ಹೊಂದುವ ಯೋಜನೆ ಜಾರಿಯಾಗಲಿ

11:52 PM Dec 19, 2021 | Team Udayavani |

ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆ, ಪ್ರವಾಹ ಮತ್ತು ಬರಗಾಲದಂಥ ನೈಸರ್ಗಿಕ ವಿಕೋಪಗಳ ಸಂಖ್ಯೆ ಮತ್ತು ಪರಿಣಾಮಗಳು ಗಂಭೀರವಾಗುತ್ತಿವೆ. ಈ ರೀತಿಯ ಸಮಸ್ಯೆಗಳು ಭವಿಷ್ಯದಲ್ಲಿ ಇನ್ನೂ ಗಂಭೀರ ಸ್ವರೂಪವನ್ನು ಪಡೆಯುವ ಸಾಧ್ಯತೆಗಳಿವೆ. ಇವುಗಳ ಬಗ್ಗೆ ಸಾಮಾನ್ಯವಾಗಿ ರೈತ ಸಮು­ದಾಯದಲ್ಲಿ ಚರ್ಚೆ ನಡೆದಾಗ ಇವೆಲ್ಲ “ಮಾನವನ ಪಾಪದ ಫಲ’ ಎಂಬಂಥ ಅವೈಜ್ಞಾನಿಕ ಅಭಿಪ್ರಾಯಗಳು ಮೂಡಿ ಬರುತ್ತವೆ. ಇದು ತಪ್ಪು ಧೋರಣೆ. ವೈಜ್ಞಾನಿಕವಾಗಿ ಇದು ಜಾಗತಿಕ ಹವಾಮಾನ ವೈಪರೀತ್ಯದ ಪರಿಣಾಮ.

Advertisement

ಜಗತ್ತು ಮತ್ತು ನಿಸರ್ಗ ತನ್ನ ಆಂತರಿಕ ಬದಲಾವಣೆಗಳಿಂದಾಗಿ ನಿರಂತರ ಚಲನಶೀಲವಾಗಿದೆ ಮತ್ತು ಲಕ್ಷಾಂತರ ವರ್ಷಗಳಿಂದ ಉಗಮವಾಗುತ್ತಲೇ ಇದೆ. ಅಲ್ಲಿ ನಿಸರ್ಗ, ಮಾನವ ಸಮಾಜ, ಆರ್ಥಿಕ ಬೆಳವಣಿಗೆ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ಬೆಳೆದು ಬಂದಿವೆ. ಆದರೆ ಕಳೆದೆರಡು ಶತಮಾನಗಳಲ್ಲಿ ಕೈಗಾರಿಕಾ ಕ್ರಾಂತಿಯ ಪಾರ್ಶ್ವ ಪರಿಣಾಮಗಳಿಂದಾಗಿ ಜಾಗತಿಕ ತಾಪಮಾನದ ಹೆಚ್ಚಳದಿಂದ, ಹವಾಮಾನದಲ್ಲಿ ಅಗಾಧ ಪ್ರಮಾಣದ ಏರುಪೇರುಗಳು ಉಂಟಾಗುತ್ತಿವೆ. ಇದರಿಂದಾಗಿ,

ಸರ್ಗಿಕ ಸಂಪನ್ಮೂಲಗಳಾದ ಅರಣ್ಯ, ಜಲ, ನೆಲ, ಪ್ರಾಣಿ, ಪಕ್ಷಿ, ಮನುಷ್ಯರು ಮತ್ತು ಇನ್ನಿತರ ಜೀವಿಗಳ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತಿವೆ. ಈ ಪರಿಣಾಮಗಳು ನಮ್ಮ ಕೃಷಿ, ಉದ್ದಿಮೆ, ಆರೋಗ್ಯ ಮತ್ತು ಆರ್ಥ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿವೆ.

ಮಳೆ ಚಕ್ರ ಮತ್ತು ಬೆಳೆ ಚಕ್ರದ ಮಧ್ಯದ ಪರಸ್ಪರ ಪೂರಕ ಸಂಬಂಧ ಕಳಚಿ ಬೀಳುತ್ತಿದೆ. ಇದರಿಂದಾಗಿ ಕೃಷಿ ಸಂಕಟಗಳು ಎದುರಾಗುತ್ತಿವೆ.

ಅಕಾಲಿಕ ಮಳೆ, ಅತಿವೃಷ್ಟಿ, ಪ್ರವಾಹ ಒಂದೆಡೆಯಾದರೆ, ಅನಾವೃಷ್ಟಿ ಹಾಗೂ ಬರಗಾಲ ರೈತರನ್ನು ಧೃತಿಗೆಡಿಸಿದೆ. ನಿಸರ್ಗದ ಸಕಾರಾತ್ಮಕ ನೆರವಿನಿಂದ ಮಾತ್ರ ಕೃಷಿ ಯಶಸ್ಸು ಸಾಧ್ಯ. ಈಗ ಆ ಕೊಂಡಿ ಕಳಚಿ ಬೀಳುತ್ತಿದೆ. ಕೃಷಿ ದುಃಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆ- ಬೆಳೆ ಚಕ್ರದಲ್ಲಿ ವ್ಯತ್ಯಯವಾಗಿ ಕೃಷಿ ಉತ್ಪಾದನೆ ಕುಂಠಿತವಾಗುತ್ತಿದೆ. ಐತಿಹಾಸಿಕವಾಗಿ ಜಗತ್ತಿನ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದ ಕೃಷಿ ಇಳುವರಿ ಕಡಿಮೆಯಾಗಿದೆ. ಈಗ, ಹವಾಮಾನ ವೈಪರೀತ್ಯದಿಂದ ಇಳುವರಿ ಹಾಗೂ ಉತ್ಪಾದನೆ ಕಡಿಮೆಯಾಗುತ್ತ ಸಾಗಿವೆ. ನಿಸರ್ಗದ ಸವಾಲುಗಳನ್ನು ಎದುರಿಸಲು ಸಮಾಜ ಮತ್ತು ಸರಕಾರಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿವೆ. ಜಲ-ನೆಲ ಸಂರಕ್ಷಣೆ, ಕೃಷಿ ಅಭಿವೃದ್ಧಿಗೆ ಸರಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿವೆ. ಆದಾಗ್ಯೂ ಮುನಿಸಿಕೊಂಡ ನಿಸರ್ಗದ ಎದುರು ಮಾನವ ಸಮಾಜ ಅಸಹಾಯಕವೆಂಬಂತೆ ಕಾಣುತ್ತಿದೆ.

Advertisement

ಇದನ್ನೂ ಓದಿ:ಫಿಲಿಪೈನ್ಸ್​ನಲ್ಲಿ ರೈ ಚಂಡಮಾರುತದ ಅಟ್ಟಹಾಸ; 112 ಸಾವು

ಎಷ್ಟೆಲ್ಲ ನೈಸರ್ಗಿಕ ವಿಕೋಪಗಳ ಜತೆಗೆ ಬೆಳೆ ಹಾನಿ, ರೋಗ ರುಜಿನಗಳು, ಕೊಯ್ಲು, ಕೊಯ್ಲೋತ್ತರ ಹಾನಿ, ಸಾಗಣೆ, ಮಾರಾಟದ ಅನೇಕ ಸವಾಲುಗಳನ್ನು ರೈತ ಎದುರಿಸಬೇಕಾಗುತ್ತದೆ. ಇವೆಲ್ಲವುಗಳನ್ನು ಮೀರಿ ಮಾರುಕಟ್ಟೆ ತಲುಪಿದಾಗ ಇನ್ನೊಂದು ತರಹ‌ದ ಸಂಕಟಗಳು ಉದ್ಭವವಾಗುತ್ತವೆ. ದೇಶದ ಅನೇಕ ಕೃಷಿ ಅರ್ಥಶಾಸ್ತ್ರಜ್ಞರ ವರದಿಗಳು ಮತ್ತು ಅಭಿಪ್ರಾಯಗಳಂತೆ ರೈತನಿಗೆ ಕೃಷಿಯಲ್ಲಿ ನಿವ್ವಳ ಲಾಭ ಕಷ್ಟ ಸಾಧ್ಯ. ಕೃಷಿ ಮತ್ತು ಕೃಷಿಯೇತರ ನಡುವಿನ ವಿನಿಮಯ/ಕೊಡುಕೊಳ್ಳುವ ಸಂಬಂಧಗಳು ರೈತ ಸಮುದಾಯದ ಹಿತಾಸಕ್ತಿಗೆ ಪೂರಕವಾಗಿಲ್ಲ. ಕೃಷಿ ಮಾರಾಟ ವ್ಯವಸ್ಥೆಯಲ್ಲಿ ಬಳಕೆದಾರರು ಕೊಡ ಮಾಡುವ ಪ್ರತೀ ರೂಪಾಯಿಯಲ್ಲಿ ರೈತ- ಉತ್ಪಾದಕನಿಗೆ ದೊರೆಯುವ ಮೊತ್ತ ಅತೀ ಕಡಿಮೆಯಾಗಿದೆ. ಕೃಷಿ ಮಾರಾಟ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳೇ ಹೆಚ್ಚಿನ ಲಾಭಾಂಶ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದರೊಟ್ಟಿಗೆ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರೆಯದೆ ಇರುವುದು ಕೂಡ ಕಟು ಸತ್ಯ. 1960ರ ದಶಕಗಳಿಂದಲೂ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಒದಗಿಸಿಕೊಡಲು ನಿರಂತರ ನೀತಿ ನಿರೂಪಣೆಯ ಪ್ರಯತ್ನಗಳು ನಡೆದರೂ ರೈತನಿಗೆ ನ್ಯಾಯ ಒದಗಿಸುವುದು ಸಾಧ್ಯವಾಗುತ್ತಿಲ್ಲ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ರಚನೆ, ಬೆಂಬಲ ಬೆಲೆ ನಿರೂಪಣೆ, ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ಸ್ಥಾಪನೆ ಮತ್ತಿತರ ಸುಧಾರಣೆಗಳನ್ನು ಮಾಡಿದಾಗಲೂ ರೈತ-ಕುಟುಂಬಕ್ಕೆ ಯೋಗ್ಯ ಆದಾಯ ದೊರೆಯುತ್ತಿಲ್ಲ.

ಕೃಷಿ ಮೂಲತಃ ನಿಸರ್ಗ ಆಧಾರಿತ ಕಸಬು. ಅಲ್ಲಿ ಅನೇಕ ಗಂಡಾಂತರಗಳು ಹಾಗೂ ಅಪಾಯಗಳಿವೆ. ಅವುಗಳನ್ನು ಮೀರಿ ಮಾರುಕಟ್ಟೆ ತಲುಪಿದಾಗ ಆ ವ್ಯವಸ್ಥೆಯ ನ್ಯೂನತೆಗಳಿಂದಾಗಿ ನ್ಯಾಯ ಬೆಲೆ ದೊರೆಯುತ್ತಿಲ್ಲ. ಹೀಗಾಗಿ ರೈತ ಕುಟುಂಬಕ್ಕೆ ನ್ಯಾಯಯುತ ನಿವ್ವಳ ಆದಾಯ ದೊರೆಯುತ್ತಿಲ್ಲ. ಕೃಷಿ ಬಂಡವಾಳ ಹೂಡಿಕೆ ಜತೆಗೆ ರೈತ ಸಾಮಾಜಿಕ ಮತ್ತು ಕೌಟುಂಬಿಕ ವೆಚ್ಚಗಳನ್ನು ಮಾಡಲೇಬೇಕಾಗುತ್ತದೆ. ಕೃಷಿ ಜತೆಗೆ ಅವನ ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣ, ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಗಳನ್ನು ನಿಭಾಯಿಸಲೇಬೇಕು.

ಒಂದೆಡೆ ಕುಂಠಿತವಾಗುತ್ತಿರುವ ಇಳುವರಿ, ಇನ್ನೊಂದೆಡೆ ಮಾರುಕಟ್ಟೆ ಎಂಬ ಮಾಯಾಜಾಲದ ಸವಾಲುಗಳು ಮತ್ತು ಮತ್ತೂಂದೆಡೆ ಅಸಮರ್ಪಕ ಬೆಲೆಗಳು. ಕೊನೆಗೆ ಕೃಷಿ ಮತ್ತು ಕೃಷಿಯೇತರ ಖರ್ಚು-ವೆಚ್ಚಗಳಿಂದಾಗಿ ರೈತ ಕುಟುಂಬ ತತ್ತರಿಸುತ್ತಿದೆ. ಧೃತಿಗೆಟ್ಟು ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವುದು ಕೂಡಾ ನಮ್ಮೆದುರಿಗಿನ ಕಠೊರ ಸತ್ಯ. ಕೃಷಿ ತಜ್ಞ ಡಾ| ಎಂ.ಎಸ್‌. ಸ್ವಾಮಿನಾಥನ್‌ ಅವರ ಅಭಿಪ್ರಾಯ ದಂತೆ ಈ ಘಟನೆಗಳು ಮುಂದುವರಿಯಕೂಡದು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಯತ್ನಗಳು ಇನ್ನೂ ಬಲವರ್ಧನೆಯಾಗಬೇಕು. ನಿಸರ್ಗ ಮತ್ತು ಮಾರುಕಟ್ಟೆ ಎಂಬ ಮಾಯಾಜಾಲದ ಸವಾಲುಗಳನ್ನು ರೈತ ಸಮರ್ಥವಾಗಿ ಎದುರಿಸಿ ಬಾಳಿ, ಬದುಕಬೇಕಾದರೆ ಪ್ರಭುತ್ವದ ಅಭಯ ಹಸ್ತ ಅತ್ಯಂತ ಆವಶ್ಯಕವಾಗುತ್ತದೆ. ಈ ನಿಟ್ಟಿನಲ್ಲಿ ಹವಾಮಾನ ವೈಪರೀತ್ಯವನ್ನು ಎದುರಿಸಲು ಅಳವಡಿಕೆ ಮತ್ತು ಹೊಂದಾಣಿಕೆಯ ಕಾರ್ಯಕ್ರಮಗಳು ಜಾಗತಿಕ ಮತ್ತು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನ­ಗೊಳ್ಳಬೇಕು. ಹವಾಮಾನಕ್ಕೆ ಹೊಂದಿಕೊಳ್ಳುವ ಕೃಷಿ ಕಾರ್ಯಕ್ರಮಗಳು ಜಾರಿಯಾಗಬೇಕು. ಬೆಳೆ ವೈವಿಧ್ಯತೆ, ಸಮಗ್ರ ಕೃಷಿ ಪದ್ಧತಿ, ಕೃಷಿ ಪೂರಕ ಉದ್ದಿಮೆಗಳಿಗೆ ಉತ್ತೇಜನದ ಮೂಲಕ ರೈತ ಕುಟುಂಬದ ಆದಾಯವನ್ನು ಹೆಚ್ಚಿಸಬಹುದಾಗಿದೆ.

ಕೃಷಿ ಮಾರುಕಟ್ಟೆ ವ್ಯವಸ್ಥೆ ಸದೃಢವಾಗಬೇಕು. ಕೃಷಿ ಉತ್ಪನ್ನಗಳ ಬೆಲೆ ಕುರಿತು ಡಾ|ಸ್ವಾಮಿನಾಥನ್‌ ವರದಿಯ ಶಿಫಾರಸುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ. ಕೃಷಿ ಬಂಡವಾಳ, ಉತ್ಪಾದನ ವೆಚ್ಚದ ಅಪಾಯಗಳನ್ನು ಮೀರಿ, ನಿರ್ವಹಣಆದಾಯ  ಕೌಟುಂಬಿಕ ಖರ್ಚು- ವೆಚ್ಚಗಳನ್ನು ಸರಿದೂಗಿಸಿ, ಅಲ್ಪ-ಸ್ವಲ್ಪವಾದರೂ ನಿವ್ವಳ ಉಳಿತಾಯಗಳ ವ್ಯವಸ್ಥೆ ನಿರ್ಮಾಣವಾಗಬೇಕು. ಆಗ ಮಾತ್ರ ಮಾನವ ಸಮಾಜವನ್ನು ಪೊರೆವ ಕೃಷಿ ಎಂಬ ಬೃಹತ್‌ ಯಂತ್ರ ಚಲಿಸಬಹುದಾಗಿದೆ. ಅಂದಾಗ ಮಾತ್ರ ಆಹಾರ ಭದ್ರತೆ, ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯ ಸಾಧ್ಯ. ಕೊನೆಯದಾಗಿ, ಲಾಭಕೋರತನದ ಜಾಗತಿಕ ನವ ಉದಾರೀಕರಣದ ನೀತಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಧಕ್ಕೆಯಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಮತ್ತು ರೈತ ಕುಟುಂಬಕ್ಕೆ ಪೂರಕವಾಗುವಂಥಹ ಸಮಗ್ರ ಕೃಷಿ ನೀತಿ ಆವಶ್ಯಕತೆ ಎದ್ದು ಕಾಣುತ್ತದೆ. “ಕೃಷಿತೋನಾಸ್ತಿ ದುರ್ಭಿಕ್ಷಃ’ ಎಂದು ಸಾರಿರುವ ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರದ ರಕ್ಷಣೆಯಲ್ಲಿ ಪ್ರಭುತ್ವದ ಪಾತ್ರ ಬಹು ದೊಡ್ಡದಾಗಿದೆ.

-ಡಾ|ರಾಜೇಂದ್ರ ಪೊದ್ದಾರ
ನಿರ್ದೇಶಕರು,
ವಾಲ್ಮಿ – ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next